

ಮೂಡಿಗೆರೆ: ಸಮಾಜದ ವಿವಿಧ ಸ್ತರಗಳಲ್ಲಿ ಮಹಿಳೆಯರು ಎಷ್ಟರಮಟ್ಟಿಗೆ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ ಎಂಬುದರ ಮೇಲೆ ಒಂದು ಸಮಾಜದ ಪ್ರಗತಿಯ ಮಾನದಂಡ ಅವಲಂಬಿತವಾಗಿದೆ. ಮಹಿಳೆಯರಿಗೆ ಸಿಗುವ ಗೌರವ ಮತ್ತು ಅವಕಾಶಗಳು ಸಮಾಜದ ಕನಸು ನನಸಾಗಲು ಪೂರಕವಾಗಿದೆ ಎಂದು ತಹಸೀಲ್ದಾರ್ ಎಸ್.ಅಶ್ವಿನಿ ಹೇಳಿದರು.
ಜೇಸಿಐ ಸಪ್ತಾಹದ ಅಂಗವಾಗಿ ಲೇಡಿ ಜೇಸಿ ವಿಭಾಗದಿಂದ ನಡೆದ ಮಹಿಳಾ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರು ಅಂಜಿಕೆ ಸ್ವಭಾವ ಮತ್ತು ಕೀಳರಿಮೆ ಬಿಟ್ಟು ಪ್ರತಿ ಕ್ಷೇತ್ರಗಳಲ್ಲಿ ಮುಂದೆ ಬರಬೇಕು. ಈಗ ಎಲ್ಲ ಕ್ಷೇತ್ರಗಳಲ್ಲಿ ಪುರುಷರಷ್ಟೇ ಸಮಾನ ಅವಕಾಶ ಮಹಿಳೆಯರಿಗಿದೆ. ಇದನ್ನು ಮಹಿಳೆಯರು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸಮಾನತೆ ಎಂಬುದು ಕೇವಲ ಘೋಷವಾಕ್ಯದಲ್ಲಿ ಉಳಿಯಬಾರದು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಸರ್ಕಾರದೊಂದಿಗೆ ಸಂಘ ಸಂಸ್ಥೆಗಳು ಕೈ ಜೋಡಿಸಬೇಕು. ಜೆಸಿಐ ಸಂಸ್ಥೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.
ಜೆಸಿಐ ಮಹಿಳಾ ವಿಭಾಗದ ರಾಷ್ಟ್ರೀಯ ನಿರ್ದೇಶಕಿ ಯಶಸ್ವಿನಿ ಮಾತನಾಡಿ, ಸಮಾಜದಲ್ಲಿ ಮಹಿಳೆ ಹಲವು ವಿಭಿನ್ನ ಪಾತ್ರಗಳನ್ನು ನಿಭಾಯಿಸುತ್ತಾಳೆ. ತಾಯಿಯಾಗಿ, ಮಗಳಾಗಿ, ಮಡದಿಯಾಗಿ, ಸಹೋದರಿಯಾಗಿ ಹೀಗೆ ಸಂಸಾರ ಮತ್ತು ಸಮಾಜದಲ್ಲಿ ನಿರ್ಣಾಯಕ ಪಾತ್ರ ಮಹಿಳೆಯದ್ದಾಗಿದೆ. ಮಹಿಳೆಯರು ಕೇವಲ ಮನೆಗೆ ಸೀಮಿತವಾಗದೆ ಸಮಾಜದಲ್ಲಿ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಉತ್ತಮ ಕೃಷಿ, ವೈವಿಧ್ಯಮಯ ಅಡುಗೆ ತಯಾರಿಕೆ, ಸಾವಯಮ ಕೃಷಿ, ಸಮಾಜಸೇವೆಯಲ್ಲಿ ಗುರುತಿಸಿಕೊಂಡಿರುವ ಹಂತೂರು ಗ್ರಾಮದ ಪುಷ್ಪಾ ಮಂಜುನಾಥ್ ಮತ್ತು ನಾಟಿವೈದ್ಯೆ ಬೆಟ್ಟಗೆರೆ ಗ್ರಾಮದ ನಾಗರತ್ನ ದೊಡ್ಡಶೆಟ್ಟಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ರೇಖಾ ನಾಗರಾಜ್, ಪೃಥ್ವಿ ಪ್ರದೀಪ್, ಕಮಲ, ದಿವ್ಯ ಸುಪ್ರೀತ್, ಪ್ರದೀಪ್, ನಿಶ್ಚಿತ ಯತೀಶ್, ರೇಖಾ ರವಿರಾಜ್, ಪ್ರಸಂಶ, ಈಶಾನಿ ಇತರರಿದ್ದರು.