

ಲಕ್ಷ್ಮೇಶ್ವರ: ದೇವರು ಎಂದರೆ ಅಗೋಚರ, ಸರ್ವವ್ಯಾಪಿ. ನಾವೆಲ್ಲರೂ ದೇವರನ್ನು ಜಾತಿ, ಧರ್ಮಕ್ಕೆ ಸೀಮಿತಗೊಳಿಸಿ, ಸಣ್ಣವರನ್ನಾಗಿಸುವ ಮನಸ್ಥಿತಿಗೆ ಬಂದಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಬೆಳ್ಳಟ್ಟಿ ರಾಮಲಿಂಗೇಶ್ವರ ದಾಸೋಹ ಮಠದ ಶ್ರೀ ಬಸವರಾಜ ಸ್ವಾಮೀಜಿ ಹೇಳಿದರು.
ಪಟ್ಟಣದ ಪೇಟೆ ಶ್ರೀ ಹಾವಳಿ ಆಂಜನೇಯ ದೇವಸ್ಥಾನ ಟ್ರಸ್ಟ್ ಹಾಗೂ ಹಿಂದು ಮಹಾಸಭಾ ಗಣಪತಿ ಸೇವಾ ಮಂಡಳಿಯಿಂದ ಶನಿವಾರ ಹನುಮ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಪರೋಪಕಾರಕ್ಕಾಗಿ ಬದುಕಿದ ಆಂಜನೇಯಸ್ವಾಮಿಯ ಬದುಕು ಎಲ್ಲರಿಗೂ ಆದರ್ಶ. ಶ್ರೀರಾಮ ಬಂಟ ಹನಮಂತನ ಭಕ್ತಿ, ನಿಷ್ಠೆ, ಆತ್ಮಸ್ಥೈರ್ಯ ಯುವಕರ ಬದುಕಿಗೆ ಪ್ರೇರಣೆಯಾಗಬೇಕು. ಹನಮಂತ ಕೇವಲ ವ್ಯಕ್ತಿಯಲ್ಲ ಪ್ರತಿಯೊಬ್ಬರ ಬದುಕಿನ ಆದರ್ಶ. ಭಕ್ತಿ, ಶ್ರದ್ಧೆ, ಸತ್ಯ, ಶಾಂತಿ, ಪ್ರೀತಿ, ಸಹೋದರತ್ವ ಸದ್ಗುಣಗಳ ಸಂಕೀರ್ಣತೆಯಿಂದ ಕೂಡಿದ ದೇವತಾ ಮನುಷ್ಯ. ಪ್ರತಿಯೊಬ್ಬ ಮನುಷ್ಯ ಧರ್ಮ, ಸಂಸ್ಕಾರ, ಮಾನವೀಯತೆ, ಕರ್ತವ್ಯ ಪ್ರಜ್ಞೆಗಳನ್ನು ರೂಢಿಸಿಕೊಂಡು ಸಾರ್ಥಕ ಜೀವನ ಹೊಂದಬೇಕು. ಹನುಮಂತನ ಪ್ರೇರಣೆಯಿಂದ ಪ್ರಕೃತಿಯಂತೆ ನಮ್ಮೆಲ್ಲರ ಬದುಕು ಪರೋಪಕಾರದಿಂದ ಕೂಡಿರಬೇಕು ಎಂದರು.
ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಬಜಾರ್ ವರ್ತಕರ ಸಂಘದ ಅಧ್ಯಕ್ಷ ಬಸವೇಶ ಮಹಾಂತಶೆಟ್ಟರ, ಶಿರಹಟ್ಟಿ ಬಿಜೆಪಿ ಮಂಡಲ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ್ ಮಾತನಾಡಿದರು.
ಶ್ರೀಪೇಟೆ ಹಾವಳಿ ಆಂಜನೇಯ ಟ್ರಸ್ಟ್ ಅಧ್ಯಕ್ಷ ನೀಲಪ್ಪ ಕರ್ಜಕಣ್ಣವರ ಅಧ್ಯಕ್ಷತೆ ವಹಿಸಿದ್ದರು. ಈಶಪ್ಪ ಕುಂಬಾರ, ನಿಂಗಪ್ಪ ಬನ್ನಿ, ಜಗದೀಶ ಪುರಾಣಿಕಮಠ, ದೇವಸ್ಥಾನ ಪ್ರಧಾನ ಅರ್ಚಕ ಮುರುಘೇಂದಸ್ವಾಮ್ರಿ ಹಿರೇಮಠ, ದೇವಸ್ಥಾನ ಕಮಿಟಿ ಸದಸ್ಯರು ಹಾಗೂ ಗಣಪತಿ ಸೇವಾ ಮಂಡಳಿ ಪದಾಧಿಕಾರಿಗಳು ಇದ್ದರು.
ವಾಸು ಮೆಲೋಡಿಸ್ ಲಕ್ಷ್ಮೇಶ್ವರ ಹಾಗೂ ಮೈಸೂರಿನ ಜ್ಯೂ. ಪುನೀತ್ ರಾಜಕುಮಾರ್ ಮತ್ತು ಸಂಗಡಿಗರಿಂದ ರಸಮಂಜರಿ ಕಾರ್ಯಕ್ರಮ, ಸ್ಥಳೀಯ ವೇದಿಕಾ ನೃತ್ಯಶಾಲೆ ಹಾಗೂ ಕಲಾ ವೈಭವ ಭರತನಾಟ್ಯ ಶಾಲೆ ಮಕ್ಕಳಿಂದ ಭರತನಾಟ್ಯ ಕಾರ್ಯಕ್ರಮ ನಡೆದವು. ವಾಸು ಭೋಮಲೆ, ಷಣ್ಮುಖ ಗಡ್ಡೆಣ್ಣವರ, ರತ್ನಾ ಕುಂಬಾರ ನಿರೂಪಿಸಿದರು.