

ಕಪ್ಪಸೋಗೆ: ಹುಲ್ಲಹಳ್ಳಿ ಹೋಬಳಿಯ ಕಪ್ಪಸೋಗೆ ಗ್ರಾಮದಲ್ಲಿ ಹನುಮ ಜಯಂತಿ ಪ್ರಯುಕ್ತ ಶ್ರೀ ಆಂಜನೇಯಸ್ವಾಮಿ ದೇಗುಲದ ಗರುಡಗಂಬ ಪ್ರತಿಷ್ಠಾಪನೆಯನ್ನು ವೀರಭದ್ರಸ್ವಾಮಿ ಅವರ ನೇತೃತ್ವದಲ್ಲಿ ಶುಕ್ರವಾರ ನೆರವೇರಿಸಲಾಯಿತು.
ಶ್ರೀ ವೀರಾಂಜನೇಯ ಸ್ವಾಮಿಗೆ ಬೆಳಗ್ಗೆ ಗಣಪತಿಪೂಜೆ, ಹೋಮ-ಹವನ, ರುದ್ರಾಭಿಷೇಕ, ಪಾರಾಯಣ, ನೈವೇದ್ಯ, ಮಹಾಮಂಗಳಾರತಿ ನೆರವೇರಿಸಲಾಯಿತು. ವೀರಾಂಜನೇಯ ಮೆರವಣಿಗೆ ಪ್ರಯುಕ್ತ ಗ್ರಾಮ ಹಾಗೂ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿ, ತಳಿರು-ತೋರಣ ಹಾಗೂ ವಿದ್ಯುತ್ ದೀಪಾಲಂಕಾರಗಳಿಂದ ಅಲಂಕರಿಸಲಾಗಿತ್ತು. ವಿವಿಧ ರಂಗೋಲಿಗಳಿಂದ ರಸ್ತೆಗಳನ್ನು ಸಿಂಗಾರ ಗೊಳಿಸಲಾಗಿತ್ತು.
ವೀರಾಂಜನೇಯ ಮೂರ್ತಿಯನ್ನು ವಿವಿಧ ಹೂಗಳಿಂದ ಅಲಂಕರಿಸಿ, ಪಲ್ಲಕ್ಕಿಯಲ್ಲಿಟ್ಟು ಹಾಲರವಿ, ವೀರಗಾಸೆ, ಪೂಜಾ ಕುಣಿತ, ನಂದಿಕಂಬ ಕುಣಿತ, ನಗಾರಿ ಹಾಗೂ ಮಂಗಳವಾದ್ಯಗಳೊಂದಿಗೆ ಮೂರ್ತಿಯನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಶ್ರೀ ವೀರಾಂಜನೇಯ ಪೂಜೆಗೆ ಆಗಮಿಸುವ ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು. ಕಪ್ಪಸೋಗೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು, ಯಜಮಾನರು ಭಾಗವಹಿಸಿದ್ದರು.