

ಬೆಟ್ಟದಪುರ: ಸಮೀಪದ ಸೂಳೆಕೋಟಿ(ಹನುಮಂತಪುರ) ಗ್ರಾಮದಲ್ಲಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ವತಿಯಿಂದ ಮಂಗಳವಾರ ಆಂಜನೇಯಸ್ವಾಮಿಯ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಮಂಗಳವಾರ ಸಂಭ್ರಮದಿಂದ ಜರುಗಿತು.
ದೇವಾಲಯದಲ್ಲಿ ಮುಂಜಾನೆಯಿಂದಲೇ ಶ್ರೀ ಆಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ, ಶ್ರೀ ಸೀತಾ ರಾಘವ ಕಲ್ಯಾಣೋತ್ಸವ ನಡೆಯಿತು. ಬಳಿಕ ದೇವಾಲಯದ ಪ್ರಾಂಗಣದಲ್ಲಿ ಉತ್ಸವ ಮೂರ್ತಿಯನ್ನು ಮೂರು ಬಾರಿ ಪ್ರದಕ್ಷಣೆ ಮಾಡಿದ ಬಳಿಕ ವಿವಿಧ ಪುಷ್ಪಗಳಿಂದ ಅಲಂಕೃತಗೊಂಡಿದ್ದ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ವಿವಿಧ ಜಿಲ್ಲೆಗಳಿಂದ ಬಂದಂತ ಭಕ್ತಾದಿಗಳು ಬ್ರಹ್ಮರಥೋತ್ಸವಕ್ಕೆ ಹಣ್ಣು-ದವನ ಎಸೆದು ಶ್ರದ್ಧಾಭಕ್ತಿಯಿಂದ ಕಾವೇರಿ ನದಿ ದಂಡೆಯವರಿಗೆ ರಥವನ್ನು ಎಳೆದರು.
ರಥ ಎಳೆಯುವ ಸಂದರ್ಭದಲ್ಲಿ ಯುವಕರು ಹನುಮನಿಗೆ ಜೈಕಾರ ಹಾಕಿದರು. ರಥೋತ್ಸವದಲ್ಲಿ ವೀರಗಾಸೆ ನೃತ್ಯ ನೋಡುಗರ ಮನಸೂರೆಗೊಂಡಿತ್ತು. ಬಿರುಬಿಸಿಲನ್ನು ಲೆಕ್ಕಿಸದೆ ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಭಕ್ತಾದಿಗಳಿಗೆ ಗ್ರಾಮಸ್ಥರಿಂದ ತಂಪು ಪಾನೀಯ ಹಾಗೂ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ರಥೋತ್ಸವದ ಪ್ರಯುಕ್ತ ಗ್ರಾಮದಲ್ಲಿ ತಳಿರು-ತೋರಣ, ಕೇಸರಿ ಬಾವುಟಗಳು ರಾರಾಜಿಸುತ್ತಿದ್ದವು. ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕಣಗಾಲು ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.
ತಹಸೀಲ್ದಾರ್ ನಿಸರ್ಗಪ್ರಿಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಿಂಗ್ರಿ ಶೆಟ್ಟಿ, ಕಾರ್ಯದರ್ಶಿ ಶಿವರಾಮ, ಅರ್ಚಕ ಆನಂದ್ ಸೇರಿದಂತೆ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.