

ಹೂವಿನಹಡಗಲಿ: ತಾಲೂಕಿನ ಸುಕ್ಷೇತ್ರ ಮದಲಗಟ್ಟಿಯಲ್ಲಿ ಸಂಸದ ಇ.ತುಕಾರಾಮ್ 50 ಲಕ್ಷ ರೂ. ವೆಚ್ಚದ ಸಮುದಾಯ ಭವನ ಹಾಗೂ ಶೌಚಗೃಹ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿ, ತಾಲೂಕಿನ ಪುಣ್ಯ ಕ್ಷೇತ್ರವಾದ ಮದಲಗಟ್ಟಿಗೆ ಸಾವಿರಾರು ಜನರು ಆಗಮಿಸುತ್ತಾರೆ. ಅವರಿಗೆ ಮೂಲ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಜೆಎಸ್‌ಡಬ್ಲುೃ ಸಿಎಸ್‌ಆರ್ ಅನುದಾನದಡಿಯಲ್ಲಿ ಈ ಕಾಮಗಾರಿ ಆರಂಭಿಸಲಾಗಿದೆ. ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಮಾಜಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಮಾತನಾಡಿ, ಈ ಭಾಗದ ಆರಾಧ್ಯ ದೈವ ಮದಲಗಟ್ಟಿ ಆಂಜನೇಯ ಸ್ವಾಮಿ ಕೇವಲ ನಮ್ಮ ತಾಲೂಕಿಗೆ ಮಾತ್ರ ಸೀಮಿತವಾಗದೆ ರಾಜ್ಯದ ಇತರೆ ಜಿಲ್ಲೆಗಳ ಭಕ್ತರ ಆರಾಧ್ಯದೈವವಾಗಿದೆ. ಕ್ಷೇತ್ರಕ್ಕೆ ಬರುವ ಭಕ್ತರಿಗೆ ಹಂತ ಹಂತವಾಗಿ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶವನ್ನು ಸಂಸದರು ಹೊಂದಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಹನುಮಂತಪ್ಪ , ಪ್ರಮುಖರಾದ ಪಿ.ವಿಜಯಕುಮಾರ, ಹಾಲೇಶ, ಚಂದ್ರಾನಾಯ್ಕ, ಹಕ್ಕಂಡಿ ರುದ್ರೇಶ ಇತರರಿದ್ದರು.