ಊರ ಕಾಯೋ ಕಾವಲು ಆಂಜನೇಯ

CLK KAVALU ANJANEYA
Published on

ಕೊರ‌್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ: ಆಂಜನೇಯನ ರಾಮಭಕ್ತಿ ಮಹಿಮೆಗೆ ಇತಿಹಾಸವೇ ಇದೆ. ಅದೇ ರೀತಿ ಹನುಮನ ಭಕ್ತಿ ಎಲ್ಲೆಡೆ ಪಸರಿಸುವಂತೆ 800 ವರ್ಷಗಳ ಹಿಂದೆಯೇ ಶಂಕರಾಚಾರ್ಯರು ರಾಜ್ಯದ ಹಲವೆಡೆ ಹನುಮಂತನ ಮೂರ್ತಿಗಳನ್ನು ಸ್ಥಾಪಿಸಿರುವ ಪರಂಪರೆಯನ್ನು ಧಾರ್ಮಿಕ ನೆಲೆಯಲ್ಲಿ ಕಾಣುತ್ತೇವೆ.

ತಾಲೂಕಿನ ತೊರೆಕೋಲಮ್ಮನಹಳ್ಳಿ ಸಮೀಪದ ರೇಖಲಗೆರೆ ಅಮೃತ ಕಾವಲಿನಲ್ಲಿ ಶಂಕರಾಚಾರ್ಯರಿಂದ ಸ್ಥಾಪಿತವಾದ ಹನುಮನ ಮೂರ್ತಿ ಇದೆ. ಇಲ್ಲಿನ ರೇಖಲಗೆರೆ ಗ್ರಾಮಕ್ಕೆ ಒಮ್ಮೆ ಮಾರಕ ರೋಗ ಹರಡಿ ಊರಿನ ಜನರೆಲ್ಲ ಬೇರೆಡೆ ಗುಳೆ ಹೋಗುವ ಪರಿಸ್ಥಿತಿ ಬಂದೊದಗಿದಾಗ, ಇಡೀ ಊರು ಖಾಲಿಯಾಗಿ ಬಿಕೋ ಎನ್ನುತ್ತಿತ್ತು.

ಊರ ಹೊರಗಿನ ಆಂಜನೇಯನ ಗುಡಿ ಮಾತ್ರ ಆಕರ್ಷಣೀಯವಾಗಿ ಉಳಿದಿತ್ತು. ಊರು ತೊರೆಯುತ್ತಿದ್ದ ಜನರೆಲ್ಲ ನಮ್ಮ ಗ್ರಾಮ ದೇವರು ನೀನು. ನಿನ್ನ ಭಕ್ತಿ ಮಹಿಮೆಯಿಂದ ವಿಶೇಷ ದಿನಗಳಲ್ಲಿ ನಿನ್ನ ಬಳಿಗೆ ಬಂದು ಪೂಜಾ ಕಾರ್ಯಗಳನ್ನು ನೆರವೇರಿಸುತ್ತೇವೆ ಎಂದು ಹರಕೆ ಮಾಡಿಕೊಂಡಿದ್ದ ಭಕ್ತರು, ಅದೇ ರೀತಿ ಪೂಜಾ ಕಾರ್ಯಗಳನ್ನು ನೆರವೇರಿಸುವ ಪದ್ಧತಿಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

ರೇಖಲಗೆರೆ, ಲಂಬಾಣಿಹಟ್ಟಿ, ಗುಂತಕೋಲಮ್ಮನಹಳ್ಳಿ, ಮಲ್ಲೂರಹಳ್ಳಿ, ತೊರೆಕೋಲಮ್ಮನಹಳ್ಳಿ, ನಾಯಕನಹಟ್ಟಿ, ಜಗಳೂರು ಭಾಗದ ಸಾಣೇಹಳ್ಳಿ, ತೋರಣಗಟ್ಟೆ, ಬಂಗಾರಕ್ಕನಗುಡ್ಡ, ತುರುವನೂರು, ಕೂಡ್ಲಿಗಿ ತಾಲೂಕಿನ ಆಲೂರು, ಖಾನಾಹೊಸಹಳ್ಳಿ ಸೇರಿದಂತೆ ಆಂಧ್ರ ಪ್ರದೇಶದಿಂದಲೂ ಕಾವಲು ಆಂಜನೇಯನಿಗೆ ಪೂಜಿಸಲು ಬರುವ ಭಕ್ತ ಸಮೂಹವಿದೆ.

ಕುಟುಂಬದಲ್ಲಿನ ಮಕ್ಕಳ ಜವಳ ಕಾರ್ಯ, ಯುಗಾದಿ ಪಾಢ್ಯ, ಮದುವೆ ಶಾಸ್ತ್ರ, ಶ್ರಾವಣ ಪೂಜಾ ಕಾರ್ಯಗಳ ನಡುವೆ ಇಷ್ಟಾರ್ಥಗಳು ನೆರವೇರಿದ ಸಂಭ್ರಮಕ್ಕೆ ಹರಕೆ ತೀರಿಸುವ ಪದ್ಧತಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ.

ಮೂರ್ತಿಯ ವಿಶೇಷ: ಆಂಜನೇಯನ ತಲೆಯಲ್ಲಿ ತುರುಬು, ಕೈಯಲ್ಲಿ ಸಂಜೀವಿನಿ, ಬಲಗೈ ಹಸ್ತದಲ್ಲಿರುವ ಪದ್ಮಕಮಲ, ಬಾಲದಲ್ಲಿ ಘಂಟೆ, ಮೂರ್ತಿಯ ಮೇಲೆ ಮೂಡಿ ಬಂದಿರುವ ಸೂರ್ಯ-ಚಂದ್ರರ ವಿನ್ಯಾಸ ಇರುವ ಕಾರಣ, ಶಂಕರಾಚಾರ್ಯರು ಸ್ಥಾಪಿತ ಆಂಜನೇಯ ಮೂರ್ತಿ ಎನ್ನುವುದು ದೃಢ. ಪೂರ್ವ ದಿಕ್ಕಿಗೆ ಮುಖ ಮಾಡಿ ದುಷ್ಠ ಶಕ್ತಿಯನ್ನು ಕಾಲಲ್ಲಿ ಮೆಟ್ಟಿ ದಿಟ್ಟ ಹೆಜ್ಜೆಗಳೊಂದಿಗೆ ಹೊರಟಿರುವ ಭಂಗಿ ಭಕ್ತಿ ಮಾರ್ಗದ ಇಂತಹ ಮೂರ್ತಿಗಳ ಸ್ಥಾಪನೆ ಬಹಳ ಅಪರೂಪ ಎನುವುದು ಇತಿಹಾಸಕಾರರ ವರ್ಣನೆಯಾಗಿದೆ.

ನಿರ್ಮಾಣ: ಭಕ್ತ ಗಣ ನೆರವಿನಿಂದ ಮೂಲ ದೇವಸ್ಥಾನಕ್ಕೆ ಜೀರ್ಣೋದ್ಧಾರ ಕಾರ್ಯ ಮಾಡಿಕೊಂಡು ಗುಡಿಯ ಮುಂಭಾಗದ ಪ್ರಾಂಗಣ ಮತ್ತು ಗರುಡ ಸ್ತಂಭ ಸ್ಥಾಪನೆ ಮಾಡಿಕೊಳ್ಳಲಾಗಿದೆ. ಅದೇರೀತಿ ದೇವಸ್ಥಾನದ ಮೇಲ್ಭಾಗದಲ್ಲಿ ರಾಮ, ಸೀತೆ, ಲಕ್ಷ್ಮಣ ಮತ್ತು ಆಂಜನೇಯ ಸ್ವಾಮಿಯ ಬಣ್ಣ ಬಣ್ಣದ ಚಿತ್ತಾರದ ವಿಗ್ರಹಗಳು ಭಕ್ತರ ಕಣ್ಮನ ಸೆಳೆಯುವಂತೆ ನಿರ್ಮಿಸಲಾಗಿದೆ.

ಮೂಲ ಸೌಲಭ್ಯ ಬೇಕು: ದಿನೇ ದಿನೆ ಶ್ರೀಕ್ಷೇತ್ರವಾಗಿ ಬೆಳೆಯುತ್ತಿರುವ ಧಾರ್ಮಿಕ ಸ್ಥಳಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಪ್ರತಿ ಶನಿವಾರ ವಿಶೇಷ ಪೂಜಾ ಕಾರ್ಯಗಳು ನೆರವೇರುತ್ತಿವೆ. ಇಲ್ಲಿಗೆ ಬರುವ ಭಕ್ತರ ಅನುಕೂಲಕ್ಕೆ ಮೂಲ ಸೌಕರ್ಯಕ್ಕಾಗಿ ಭವನ, ಅರ್ಚಕರಿಗೆ ನಿವಾಸದ ವ್ಯವಸ್ಥೆ ಆಗಬೇಕು.-ನಾಗೇಶ್, ಅರ್ಚಕ

ಅನುಕೂಲ ಕಲ್ಪಿಸಬೇಕು: ಶ್ರೀ ಶಂಕರಾಚಾರ್ಯರು ಸ್ಥಾಪಿಸಿರುವ ಆಂಜನೇಯ ಸ್ವಾಮಿ ದಿನೇ ದಿನೆ ಹೆಚ್ಚು ಭಕ್ತರನ್ನು ಆಕರ್ಷಿಸುತ್ತಿದೆ. ಆದರೆ, ಸೌಲಭ್ಯಗಳ ಕೊರತೆ ಇದೆ. ಆದ್ದರಿಂದ ಸಂಬಂಧಿಸಿದವರು ಅಗತ್ಯ ಸೌಕರ್ಯ ಕಲ್ಪಿಸಿ, ಭಕ್ತರಿಗೆ ಅನುಕೂಲ ಮಾಡಬೇಕು.- ಕೋಲಮ್ಮನಹಳ್ಳಿ ಪೀತಾಂಬರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net