

ಉಪ್ಪಿನಬೆಟಗೇರಿ: ಸಮೀಪದ ಹನುಮನಕೊಪ್ಪ ಗ್ರಾಮದಲ್ಲಿ ನೂತನವಾಗಿ ನಿರ್ವಣಗೊಂಡ ಆಂಜನೇಯ ಸ್ವಾಮಿ ದೇವಸ್ಥಾನ, ಆಂಜನೇಯ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಅಂಗವಾಗಿ ಉಪ್ಪಿನಬೆಟಗೇರಿ ಗ್ರಾಮದ ಮೂರುಸಾವಿರ ವಿರಕ್ತಮಠದಲ್ಲಿದ್ದ ಆಂಜನೇಯ ಮೂರ್ತಿ ಕಳಸ ಹಾಗೂ ಕಲ್ಮೇಶ್ವರ ದೇವಸ್ಥಾನದ ಪಾರ್ವತಿ ದೇವಿ ಮೂರ್ತಿ ಮೆರವಣಿಗೆ ಮಂಗಳವಾರ ಉಪ್ಪಿನಬೆಟಗೇರಿ ಹಾಗೂ ಹನುಮನಕೊಪ್ಪ ಗ್ರಾಮಗಳಲ್ಲಿ ವಿಜೃಂಭಣೆಯಿಂದ ಜರುಗಿತು.
ಮಂಗಳವಾರ ಬೆಳಗ್ಗೆ ಮೂರುಸಾವಿರ ವಿರಕ್ತಮಠದಲ್ಲಿ ಇರಿಸಿದ್ದ ಪಾರ್ವತಿದೇವಿ, ಆಂಜನೇಯ ಮೂರ್ತಿ ಹಾಗೂ ದೇವಸ್ಥಾನದ ಕಳಸಕ್ಕೆ ಕುಮಾರ ವಿರೂಪಾಕ್ಷ ಸ್ವಾಮೀಜಿ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ಉಪ್ಪಿನಬೆಟಗೇರಿ ಮಾರ್ಕೆಟ್ ರಸ್ತೆ ಮೂಲಕ ಹನುಮನಕೊಪ್ಪ ಗ್ರಾಮ ತಲುಪಿತು.
ಮೆರವಣಿಗೆಯಲ್ಲಿ ಸುಮಾರು 151 ಮಹಿಳೆಯರು ಮತ್ತು ಮಕ್ಕಳು ಪೂರ್ಣ ಕುಂಭ ಹೊತ್ತು ಸಾಗಿದರು. ಮೆರವಣಿಗೆಯುದ್ದಕ್ಕೂ ಕರಡಿ ಮಜಲು, ಕೋಲಾಟ, ಡಿಜೆ ಹಾಡುಗಳ ಸದ್ದು ಗಮನ ಸೆಳೆದವು.
ಮೆರವಣಿಗೆಯಲ್ಲಿ ಶಿವಾನಂದ ಹಟ್ಟಿ, ಚಂದ್ರಶೇಖರ ಅರಳಿಕಟ್ಟಿ, ಆತ್ಮಾನಂದ ಬೊಬ್ಬಿ, ಮಹಾದೇವಪ್ಪ ದೊಡವಾಡ, ಕಲ್ಲಪ್ಪ ಬೊಬ್ಬಿ, ಮಲ್ಲಪ್ಪ ಮಾಧನಬಾವಿ, ಕಾಶಪ್ಪ ದೊಡವಾಡ, ಜ್ಯೋತೆಪ್ಪ ಜಾಧವ, ಕಲ್ಲಪ್ಪ ಪುಡಕಲಕಟ್ಟಿ, ಶಿವಪ್ಪ ವಿಜಾಪೂರ, ಸುರೇಶಬಾಬು ತಳವಾರ, ನಾಗಪ್ಪ ಹಾರೋಬೆಳವಡಿ, ಚಂದ್ರನಾಥ ಅಷ್ಟಗಿ, ವಿರೂಪಾಕ್ಷಪ್ಪ ದೊಡವಾಡ, ಅಜೀತ ಛೆಬ್ಬಿ, ಅಶೋಕ ತಿಗಡಿ, ವರ್ಧಮಾನ ಅಷ್ಟಗಿ, ಅಶೋಕ ಕಾಗಿ ಸೇರಿದಂತೆ ಹನುಮನಕೊಪ್ಪ, ಉಪ್ಪಿನಬೆಟಗೇರಿ ಹಾಗೂ ಸುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.