ಅಂಜನಾದ್ರಿಯಲ್ಲಿ ಮೊಳಗಿದ ಹನುಮ ಜಪ
ಬೆಟ್ಟದ ತುಂಬ ಅನುರಣಿಸಿದ ಜೈಶ್ರೀರಾಮ ಮಂತ್ರ

IMG-20221205-WA0018.jpg
Published on

ಕೊಪ್ಪಳ: ಹನುಮನುದಿಸಿದ ನಾಡು ಅಂಜನಾದ್ರಿಯಲ್ಲಿ ಹನುಮ ಭಕ್ತರ ದಂಡು ಬೆಳಗ್ಗೆಯಿಂದಲೇ ದಾಂಗುಡಿ ಇಟ್ಟಿದ್ದು, ಅಂಜನಿಸುತನ ದರ್ಶನ ಪಡೆದು ಮಾಲೆ ವಿಸರ್ಜಿಸುವ ಕಾರ್ಯ ಸುಸೂತ್ರವಾಗಿ ಆರಂಭವಾಗಿದೆ.

ರಾಮಾಯಣದ ಆಂಜನೇಯ ಜನಿಸಿದ ನಾಡಾದ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಹನುಮ ಮಾಲಾ ವ್ರತಧಾರಿಗಳ ಮಾಲೆ ವಿಸರ್ಜನೆ ಕಾರ್ಯ ಪ್ರತಿ ವರ್ಷದಂತೆ ಇಂದು (ಡಿ.5)ನಡೆಯುತ್ತಿದೆ. ಆಂಜನೇಯ ಜನಿಸಿದ ಸ್ಥಳ ವಿವಾದ ಸಂಬಂಧ ಕಳೆದ ಕೆಲ ತಿಂಗಳಿಂದ ಸುದ್ದಿಯಲ್ಲಿ ಅಂಜನಾದ್ರಿ ಬೆಟ್ಟ ಹಿಂದೆಗಿಂತಲೂ ಗಮನ ಸೆಳೆದಿದೆ. ಪೂಕರವಾಗಿ ಜಿಲ್ಲಾಡಳಿತ ಈ ವರ್ಷ ಮಾಲಾ ವಿಸರ್ಜನೆ ಕಾರ್ಯಕ್ರಮವನ್ನು ಅಚ್ಚುಕಟ್ಡಾಗಿ ಆಯೋಜಿಸಿದ್ದು, ಭಾನುವಾರದಿಂದಲೇ ಮಾಲಾಧಾರಿಗಳು ಬೆಟ್ಟದ ಹತ್ತಿರ ಜಮಾಯಿಸಿದ್ದಾರೆ.

ಬೆಳಗಾವಿ, ಕಲಬುರ್ಗಿ, ಬೀದರ್, ಗದಗ, ಹುಬ್ಬಳ್ಳಿ, ಹಾವೇರಿ, ಬಳ್ಳಾರಿ, ವಿಜಯನಗರ, ದಾವಣಗೆರೆ ಸೇರಿ ರಾಜ್ಯದ ವಿವಿಧ ಮೂಲೆಗಳಿಂದ ಅಂಜನಿಸುತನ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಪಾದಾಯಾತ್ರೆ ಮೂಲಕ ಬಂದವರು ಭಾನುವಾರವೇ ಬೆಟ್ಟ ತಲುಪಿ ಇಂದು ಬೆಳಗ್ಗೆಯಿಂದ ಸ್ವಾಮಿ ದರ್ಶನ ಪಡೆದು ನಿರ್ಗಮಿಸುತ್ತಿದ್ದಾರೆ. ಬಂದವರಿಗಾಗಿ ಚಿಕ್ಕರಾಂಪುರ ಬಳಿ ಪ್ರಸಾದ ವ್ಯವಸ್ಥೆ ಮಾಡಿದ್ದು, ಲಕ್ಷಾಂತರ ಜನರು ಸವಿಯುತ್ತಿದ್ದಾರೆ.

ಶ್ರೀರಾಮ, ಆಂಜನೇಯನ ನೆನಹು: ಮಾಲಾಧಾರಿಗಳು ಶ್ರೀರಾಮ, ಆಂಜನೇಯ ಹಾಗೂ ನಟ ಪುನೀತ್ ರಾಜ್ ಕುಮಾರ್ ಫೋಟೋ ಹಿಡಿದು ಜೈ ಶ್ರೀರಾಮ ಮಂತ್ರ ಜಪಿಸುತ್ತ ಸಾಗುವುದು ಕಂಡುಬಂತು.

ಅನ್ನಸಂತರ್ಪಣೆ:ವಿವಿಧೆಡೆಯಿಂದ ಆಗಮಿಸುವ ಭಕ್ತರಿಗೆ ದಾರಿಯುದ್ದಕ್ಕೂ ಹಲವು ಗ್ರಾಮಸ್ಥರು ಭಕ್ತರಿಗಾಗಿ ಪ್ರಸಾದ, ಉಪಾಹಾರ ಹಾಗೂ ಪಾನಕ ವ್ಯವಸ್ಥೆ ಕಲ್ಪಿಸಿದ್ದು ಕಂಡುಬಂತು. ಶಿವಪುರ, ಅಗಳಕೇರಾ, ಬಂಡಿ ಹರ್ಲಾಪುರ, ಹನುಮನಳ್ಳಿ ಗ್ರಾಮದಲ್ಲಿ ಪ್ರಸಾದ ಸೇವೆ ಸಲ್ಲಿಸುವುದು ಗಮನ ಸೆಳೆಯಿತು.

ಸಂಕೀರ್ತನ ಯಾತ್ರೆ:ಹನುಮ ಮಾಲೆ ವಿಸರ್ಜನೆ ಹಿನ್ನೆಲೆಯಲ್ಲಿ ಗಂಗಾವತಿ ನಗರದಲ್ಲಿ ಹಿಂದುಪರ ಸಂಘಟನೆಗಳು ಸಂಕೀರ್ತನಾ ಯಾತ್ರೆ ಹಮ್ಮಿಕೊಂಡಿದ್ದು, ಭಜರಂಗದಳ, ಹಿಂದು ಜಾಗರಣ ವೇದಿಕೆ ವಿಶ್ವಹಿಂದೂ ಪರಿಷತ್ ಪದಾಧಿಕಾರಿಗಳು ಮಾಲಾಧಾರಿಗಳು, ಬಿಜೆಪಿ ಮುಖಂಡರು ಭಾಗಿಯಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net