

ಅವಿನಾಶ್ ಜೈನಹಳ್ಳಿ ಮೈಸೂರು
ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಿರ್ಮಿಸಿರುವ ಮಳಿಗೆ ಜನಾಕರ್ಷಣೆಯ ಕೇಂದ್ರ ಬಿಂದುವಾಗಿದೆ. ಮಳಿಗೆಯನ್ನು ‘ಅಂಜನಾದ್ರಿ ಬೆಟ್ಟ’ ಮಾದರಿಯಲ್ಲಿ ನಿರ್ಮಿಸಿರವುದು ಹೆಚ್ಚು ಜನರ ಆಕರ್ಷಣೆಗೆ ಕಾರಣವಾಗಿದೆ.
ಅಂಜನಾದ್ರಿ ಬೆಟ್ಟ ಮಾದರಿಯಲ್ಲಿಯೇ ದೊಡ್ಡ ಗುಡ್ಡ, ಬಂಡೆಗಳು, ಬಂಡೆಯ ಮೇಲೆ ಹನುಮಂತನ ಪ್ರತಿಮೆ, ದೇವಸ್ಥಾನದ ಮಾದರಿ ನಿರ್ಮಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಬೆಟ್ಟದ ಮಾಹಿತಿಯನ್ನು ಲಕದ ಮೂಲಕ ಪ್ರದರ್ಶನ ಮಾಡಲಾಗಿದೆ.
ಅಂಜನಾದ್ರಿ ಬೆಟ್ಟ ರಾಮದೂತ ಆಂಜನೇಯನ ಜನ್ಮ ಸ್ಥಳವಾಗಿದೆ. ಕೊಪ್ಪಳ ಜಿಲ್ಲೆಯಲ್ಲಿರುವ ಈ ಬೆಟ್ಟ ದೇಶದುದ್ದಕ್ಕೂ ಅಪಾರ ಭಕ್ತರನ್ನು ಸೆಳೆಯುತ್ತಿರುವ ಪ್ರಮುಖ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದೆ. ಸದ್ಯ ಈ ಬೆಟ್ಟದ ಅಭಿವೃದ್ಧಿಗೆ ರಾಜ್ಯ ಸರ್ಕಾರ 100 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.
ಪ್ರವಾಸಿ ತಾಣಗಳಿಗೆ ಹೋಗಬೇಕೇ ?
ಮಳಿಗೆ ಒಳಗೆ ರಾಜ್ಯದ ಪ್ರಮುಖ ಪ್ರವಾಸಿ ತಾಣ ಮತ್ತು ಕಲೆಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಮುಖ್ಯವಾಗಿ ಚಿಕ್ಕಮಗಳೂರಿನ ಕೆಮ್ಮಣ್ಣುಗುಂಡಿ, ಗೋಕರ್ಣದ ಓಂ ಬೀಚ್, ಕುದುರೆಮುಖ, ಪಶ್ಚಿಮ ಘಟ್ಟದ ಆಕರ್ಷಕ ತಾಣಗಳು, ಅಬ್ಬೆ ಜಲಪಾತ, ಚಿತ್ರದುರ್ಗದ ಕೋಟೆ, ಯಾಣ, ಜೋಗ ಜಲಪಾತ, ಗೋಲ್‌ಗುಂಬಜ್, ಸೋಮನಾಥಪುರದ ಚೆನ್ನಕೇಶವ ದೇವಸ್ಥಾನ, ಶ್ರವಣಬೆಳಗೊಳದ ಗೊಮ್ಮಟೇಶ್ವರ, ಬಳ್ಳಾರಿ ಕೋಟೆ, ರಂಗನತಿಟ್ಟು ಪಕ್ಷಿಧಾಮ, ಮೂಡುಬಿದಿರೆಯ ಸಾವಿರ ಕಂಬದ ಬಸದಿ, ಬಾದಾಮಿಯ ಗುಹಾಂತರ ದೇವಾಲಯಗಳು, ಪಟ್ಟದಕಲ್ಲು, ಐಹೊಳೆಯ ದುರ್ಗಾ ದೇವಸ್ಥಾನ, ಹಂಪಿ ಹೇಮಕೂಟ ಬೆಟ್ಟ, ಕಮಲ ಮಹಲ್, ಕಲ್ಲಿನ ರಥ, ಬೇಲೂರಿನ ಚೆನ್ನಕೇಶವ ದೇವಸ್ಥಾನ, ಹಳೇಬೀಡು ಹೊಯ್ಸಳೇಶ್ವರ ದೇವಸ್ಥಾನ ಸೇರಿದಂತೆ ಹತ್ತಾರು ಪ್ರವಾಸಿ ಕ್ಷೇತ್ರ ಮತ್ತು ಐತಿಹಾಸಿಕ ತಾಣಗಳ ಬಗ್ಗೆ ಸವಿವರ ಇಲ್ಲಿ ಲಭ್ಯ. ಈ ತಾಣಗಳ ಇತಿಹಾಸ, ರಾಜ್ಯದ ಯಾವ ಜಿಲ್ಲೆ, ಯಾವ ತಾಲೂಕಿನಲ್ಲಿ ಇವೆ, ಹೋಗುವುದು ಹೇಗೆ, ದೇವಸ್ಥಾನ, ಸ್ಮಾರಕಗಳನ್ನು ಯಾರ ಕಾಲದಲ್ಲಿ ನಿರ್ಮಿಸಲಾಗಿದೆ. ಅವುಗಳ ಇತಿಹಾಸ ಹೀಗೆ ಎಲ್ಲ ವಿವರಗಳಿಲ್ಲಿ ದೊರಕಲಿದೆ.