ಅಂಜಲಿ ಪ್ರಕರಣ ಸಿಐಡಿಗೆ ಹಸ್ತಾಂತರ

Dr G Parameshwar
Published on

ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದಂತೆಯೇ ಅಂಜಲಿ ಅಂಬಿಗೇರ ಅವರ ಕೊಲೆ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗುವುದು. ಈ ಕುರಿತು ಇಂದು ಅಥವಾ ನಾಳೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಥ ಪ್ರಕರಣಗಳ ಮೇಲೆ ಪ್ರಭಾವ ಬೀರಬಾರದು ಎಂಬ ಉದ್ದೇಶದಿಂದ ಸಿಐಡಿಗೆ ನೀಡಲಾಗುತ್ತಿದೆ. ಹಾಗಂತ ಸ್ಥಳೀಯ ಪೊಲೀಸರು ಅಸಮರ್ಥರಿದ್ದಾರೆ ಎಂದರ್ಥವಲ್ಲ ಎಂದರು.
ದುರಾದೃಷ್ಟವಶಾತ್ ಈ ವಿಚಾರದಲ್ಲಿ ಕೆಲ ನಾಯಕರು ರಾಜಕೀಯ ಬಣ್ಣ ಕಟ್ಟಿದರು. ಆದರೆ, ಸಿಐಡಿ ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿದೆ. ಪೊಲೀಸರು ನಿರ್ಲಕ್ಷ್ಯ ಮಾಡಿದ್ದೂ ಕೂಡ ತನಿಖೆಯಿಂದ ಹೊರಬೀಳಲಿದೆ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಬಿಜೆಪಿ ಅವರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. 2021ಜನವರಿಯಿಂದ ಏಪ್ರಿಲ್‌ವರೆಗೆ 449, 2022ರಲ್ಲಿ 466, 2023ರಲ್ಲಿ 431ಕೊಲೆ ಪ್ರಕರಣಗಳು ನಡೆದಿವೆ. 2024 ಜನವರಿಯಿಂದ ಏಪ್ರಿಲ್‌ವರೆಗೆ ಅಂದರೆ ನಮ್ಮ ಅಧಿಕಾರಾವಧಿಯಲ್ಲಿ 430 ಕೊಲೆಗಳು ನಡೆದಿವೆ. ಬಿಜೆಪಿಯವರು ಮಾಡಿದ ಆರೋಪ ಆಧರಿಸಿ ನಾಲ್ಕು ತಿಂಗಳ ಘಟನೆಗಳ ಕುರಿತು ವಿವರಿಸಿದ್ದೇನೆ ಎಂದರು.
ಅಂಜಲಿ ಪ್ರಕರಣದಲ್ಲಿ ನಿರ್ಲಕ್ಷೃ ತೋರಿದ ಡಿಸಿಪಿ ಸಹಿತ ಮೂವರನ್ನು ಅಮಾನತು ಮಾಡಲಾಗಿದೆ. ಇನ್ನಷ್ಟು ತನಿಖೆ ನಡೆಸಿ ಇದರಲ್ಲಿ ಯಾರ‌್ಯಾರ ಕೈವಾಡ ಇದೆ ಎಂಬುದನ್ನು ಇಲಾಖಾ ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದು. ನೇಹಾ ಹಾಗೂ ಅಂಜಲಿ ಹತ್ಯೆ ಬಳಿಕ ನಾನೂ ಶೀಘ್ರವೇ ಭೇಟಿ ನೀಡಲಿಲ್ಲ ಎಂಬ ಆರೋಪ ಬಂತು. ನನಗೆ ಇಲಾಖೆಯ ನಿರ್ದೇಶನಗಳಿರುತ್ತವೆ. ಸಾಕ್ಷೃ ಬದಲಾಗುವ ಅಥವಾ ಪ್ರಭಾವ ಬೀರಬಹುದೆಂಬುದು ಇರುತ್ತದೆ. ಹಾಗಾಗಿ ಬಂದಿರಲಿಲ್ಲ. ಈಗ ಬಂದಿದ್ದೇನೆ. ಆದರೂ ನಾನು ಕಚೇರಿಯಲ್ಲಿಯೇ ಕುಳಿತು ಮಾನಿಟರಿಂಗ್ ಮಾಡುತ್ತಿದ್ದೆ ಎಂದರು.
ಗಲಾಟೆಗಳು ಆಗಿಲ್ಲ: ನಮ್ಮ ಕರ್ನಾಟಕದ ಪೊಲೀಸರು ಸಮರ್ಥರಿದ್ದಾರೆ. ಹುಬ್ಬಳ್ಳಿಯಲ್ಲಿಯೂ ಕೂಡ ಗಣೇಶ ಮೂರ್ತಿ ಪ್ರತಿಷ್ಠಾಪನೆ, ಹೋಳಿ ಹಬ್ಬ, ರಂಜಾನ್ ಸಂದರ್ಭದಲ್ಲಿ ಗಲಾಟೆ ಆಗಲಿಲ್ಲ. ಚುನಾವಣೆ ಕೂಡ ಯಶಸ್ವಿಯಾಗಿ ನಡೆಯಿತು. ಕಳೆದ ಒಂದು ವರ್ಷದಲ್ಲಿ ಕೋಮು ಗಲಭೆಗಳು ನಡೆದಿಲ್ಲ. ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಹದಗೆಟ್ಟಿಲ್ಲ. ನಮ್ಮ ಪೊಲೀಸರು ಶೇ. 98ರಷ್ಟು ಕೊಲೆ ಪ್ರಕರಣ ಭೇದಿಸಿ ಅಪರಾಧಿಗಳನ್ನು ಬಂಧಿಸಿದ್ದಾರೆ ಎಂದರು.
ತಿದ್ದುಪಡಿ ಶೀಘ್ರ: 2 ವರ್ಷ ಒಂದೇ ಸ್ಥಳದಲ್ಲಿದ್ದು ಕರ್ತವ್ಯ ನಿರ್ವಹಿಸಬೇಕೆಂಬ ನಿಯಮಾವಳಿಗೆ ತಿದ್ದುಪಡಿ ಮಾಡುತ್ತಿದ್ದೇವೆ. ಅಂತರ ಜಿಲ್ಲಾ ವರ್ಗಾವಣೆಗೂ ನಿಯಮಾವಳಿ ರೂಪಿಸುತ್ತಿದ್ದೇವೆ. ಈ ಕುರಿತು ಚರ್ಚೆ ಕೂಡ ನಡೆದಿದೆ ಎಂದರು.
ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರಡ್ಡಿ, ಪ್ರಮುಖರಾದ ಅನಿಲಕುಮಾರ ಪಾಟೀಲ, ಅಲ್ತಾಫ್ ಹುಸೇನ್ ಹಳ್ಳೂರ
ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net