

ಹುಬ್ಬಳ್ಳಿ : ಇಲ್ಲಿನ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ಕೊಲೆಗೈದ ವಿಶ್ವನಾಥ ಅಲಿಯಾಸ್ ಗಿರೀಶ ಸಾವಂತ, ಮೈಸೂರಿಗೆ ಪಲಾಯನಗೈದಿದ್ದ. ಅಲ್ಲಿಂದ ಗೋವಾ ಅಥವಾ ಮಹಾರಾಷ್ಟ್ರಕ್ಕೆ ಪಲಾಯನ ಗೈಯುವ ಪ್ರಯತ್ನಕ್ಕೆ ಆತನ ದುಶ್ಚಟವೇ ಪೊಲೀಸರ ಬಂಧಿಯಾಗುವಂತೆ ಮಾಡಿದೆ.
ಕಳೆದ ಬುಧವಾರ ಹುಬ್ಬಳ್ಳಿಯ ವೀರಾಪೂರ ಓಣಿಯಲ್ಲಿ ಅಂಜಲಿ ಅಂಬಿಗೇರಳನ್ನು ಕೊಲೆಗೈದ ವಿಶ್ವನಾಥ, ಮೈಸೂರಿಗೆ ಪರಾರಿಯಾಗಿದ್ದ. ಅಲ್ಲಿಂದ ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಿಯಿಂದ ಗೋವಾ ಅಥವಾ ಮಹಾರಾಷ್ಟ್ರದ ರೈಲು ಹತ್ತಬೇಕೆಂಬ ಯತ್ನದಲ್ಲಿದ್ದ. ಅದಕ್ಕಾಗಿ ಮೈಸೂರಿನಿಂದ ವಿಶ್ವಮಾನವ ರೈಲನ್ನೂ ಏರಿದ್ದ. ಮಾರ್ಗ ಮಧ್ಯದಲ್ಲಿ ರೈಲಿನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ರೈಲಿನಲ್ಲಿ ಶೌಚಗೃಹಕ್ಕೆ ಹೋಗಿದ್ದಾಗ ಇಣುಕಿ, ಮಹಿಳೆಯ ಪತಿ ಹಾಗೂ ಸಹ ಪ್ರಯಾಣಿಕರಿಂದ ಏಟು ತಿಂದು, ತಪ್ಪಿಸಿಕೊಳ್ಳಲು ರೈಲಿನಿಂದ ಕೆಳಗೆ ಜಿಗಿದು ಗಾಯಗೊಂಡಿದ್ದಾನೆ. ಗಾಯಗೊಂಡಿದ್ದ ವಿಶ್ವನನ್ನು ರೈಲ್ವೆ ಪೊಲೀಸರು ದಾವಣಗೆರೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಾಹಿತಿ ತಿಳಿದ ಹುಬ್ಬಳ್ಳಿ-ಧಾರವಾಡ ಪೊಲೀಸರು, ದಾವಣಗೆರೆಗೆ ತೆರಳಿ, ವಿಶ್ವನಾಥನನ್ನು ಬಂಧಿಸಿದ್ದಾರೆ. ಗಾಯಗೊಂಡಿದ್ದ ವಿಶ್ವನಾಥನನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಲಾಗಿದೆ. ವಿಶ್ವನಾಥ ಅಲಿಯಾಸ್ ಗಿರೀಶ ಸಾವಂತ ಒಟ್ಟು ನಾಲ್ಕು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಮೂಲಗಳ ಪ್ರಕಾರ ಮೂವರು ಸ್ನೇಹಿತರೊಂದಿಗೆ ಸೇರಿಕೊಂಡು ಬುಲೆಟ್ ಕಳ್ಳತನ ಮಾಡುತ್ತಿದ್ದ.ವಿಶ್ವನ ಮೂವರು ಸ್ನೇಹಿತರು ಈಗಾಗಲೇ ಜೈಲು ಪಾಲಾಗಿದ್ದಾರೆ. ವಿಶ್ವ ಗಾಂಜಾ ಸೇದುತ್ತಿದ್ದ ಎಂದು ಹೇಳಲಾಗುತ್ತಿದೆ.
ಗುರುವಾರ ಬೆಳಗ್ಗೆ ಕಿಮ್ಸ್ಗೆ ಭೇಟಿ ನೀಡಿದ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಆರೋಪಿ ವಿಶ್ವನನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತೆ, ಕೊಲೆ ಆರೋಪಿ ಗಿರೀಶನ ಬಂಧನಕ್ಕೆ 8 ತಂಡಗಳನ್ನು ರಚಿಸಲಾಗಿತ್ತು ಎಂದು ತಿಳಿಸಿದ್ದಾರೆ. ವಿಶ್ವನಾಥನ ಬೆನ್ನಿಗೆ ಮತ್ತು ತಲೆಗೆ ಗಂಭೀರ ಗಾಯಗಳಾಗಿವೆ. ಸದ್ಯ ಅರೆ ಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಇದ್ದಾನೆ. ಆರೋಪಿ ಗಿರೀಶ ಹೇಳುವ ಪ್ರಕಾರ, ಅಂಜಲಿ ಮತ್ತು ಆತ ಪ್ರೀತಿ ಮಾಡುತ್ತಿದ್ದರಂತೆ ಎಂದು ಹೇಳಿದ್ದಾರೆ. ಗಿರೀಶನಿಗೆ ಸಂಪೂರ್ಣ ಪ್ರಜ್ಞೆ ಬಂದ ನಂತರ ಆತನಿಂದ ಹೇಳಿಕೆ ಪಡೆದುಕೊಳ್ಳಲಾಗುವುದು. ಇದರಿಂದ ಮತ್ತಷ್ಟು ಮಾಹಿತಿ ಹೊರಬರಲಿವೆ ಎಂದರು.
ಮತ್ತೊಂದೆಡೆ ಗುರುವಾರ ಬೆಳಗ್ಗೆ ಅಂಜಲಿಯ ಕುಟುಂಬದವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದ್ದಾರೆ.
ಶಾಸಕ ಮಹೇಶ ಟೆಂಗಿನಕಾಯಿ ಸುದ್ದಿಗೋಷ್ಠಿ ನಡೆಸಿ, ‘ಡ್ರಗ್ಸ್ ಮತ್ತು ಅಪರಾಧ ಮುಕ್ತ ಹುಬ್ಬಳ್ಳಿ ಅಭಿಯಾನ’ ನಡೆಸುವುದಾಗಿ ಘೋಷಿಸಿದ್ದಾರೆ. ಈ ಮಧ್ಯೆ ಆರೋಪಿ ಗಿರೀಶನಿಗೆ ಚಿಕಿತ್ಸೆ ಕೊಡಿಸುತ್ತಿರುವುದಕ್ಕೆ ಹತ್ಯೆಗೀಡಾದ ಅಂಜಲಿ ಕುಟುಂಬದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
===========