

ಶಿವಮೊಗ್ಗ: ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ವಿರುದ್ಧ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾ ಕುಮಾರಿ ಮಾಡಿರುವ ಆರೋಪ ಸತ್ಯಕ್ಕೆ ದೂರಾದದ್ದು. ಸಾಗರ ನಗರಸಭೆ ಸಾಮಾನ್ಯ ಸಭೆಯಲ್ಲಿ ಮೇಘರಾಜ್ ಕಾಂಗ್ರೆಸ್ ಸದಸ್ಯೆ ಲಲಿತಮ್ಮ ವಿರುದ್ಧ ಕೀಳಾಗಿ ಮಾತನಾಡಿಲ್ಲ ಎಂದು ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗಾಯತ್ರಿದೇವಿ ಮಲ್ಲಪ್ಪ ಹೇಳಿದರು.
ಸಾಗರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ವಿರುದ್ಧ ಲಲಿತಮ್ಮ ಕೋರ್ಟ್ ಮೆಟ್ಟಿಲಿರಿದ್ದರು. ಹೀಗಾಗಿ ಎರಡು ವರ್ಷದಿಂದ ಸಾಗರದಲ್ಲಿ ಅಬಿವೃದ್ಧಿ ಕಾರ್ಯಗಳು ನಡೆಯದಂತಾಗಿದೆ. ಸ್ವತಃ ಕಾಂಗ್ರೆಸ್ ಸದಸ್ಯರೇ ಲಲಿತಮ್ಮ ನಡೆಯನ್ನು ವಿರೋಧಿಸಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೇಘರಾಜ್ ರಾಜೀನಾಮೆಗೆ ಒತ್ತಾಯಿಸುತ್ತಿರುವ ಅನಿತಾ ಕುಮಾರಿ ಮೊದಲು ಮುಡಾ ಹಗರಣದ ಆರೋಪ ಎದುರಿಸುತ್ತಿರುವ ಸಿಎಂ ಸಿದ್ದರಾಯಯ್ಯ ರಾಜೀನಾಮೆಗೆ ಹೋರಾಟ ಮಾಡಲಿ ಎಂದು ತಿರುಗೇಟು ನೀಡಿದ ಗಾಯತ್ರಿದೇವಿ ಮಲ್ಲಪ್ಪ, ಮೀಸಲಾತಿ ವಿರುದ್ಧ ಲಲಿತಮ್ಮ ತಡೆಯಾಜ್ಞೆ ತಂದಿರುವುದನ್ನು ಸಭೆಯಲ್ಲಿ ಪ್ರಶ್ನಿಸಿದರೆ ಅವಮಾನ ಮಾಡಿದಂತಾಗುತ್ತದೆಯೇ ಎಂದು ವಾಗ್ದಾಳಿ ನಡೆಸಿದರು.
ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಮಹಿಳಾ ಮೀಸಲಾತಿ ಸಿಕ್ಕಿದೆ. 2008-09ರಲ್ಲಿ ದೆಹಲಿಯಲ್ಲಿ ಮಹಿಳಾ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ಮಾಡಿದರೂ ಕಾಂಗ್ರೆಸ್ ಸರ್ಕಾರ ಮೀಸಲು ಜಾರಿ ಮಾಡಿರಲಿಲ್ಲ. ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಶೇ.33 ಮೀಸಲು ಘೋಷಣೆಯಾಗಿದೆ. ಆದರೆ ಈಗ ಕಾಂಗ್ರೆಸ್‌ನ ಮಹಿಳಾ ಸದಸ್ಯೆಯೇ ಮಹಿಳಾ ಮೀಸಲಾತಿಗೆ ತಡೆಯಾಜ್ಞೆ ತಂದಿರುವುದು ವಿಪರ್ಯಾಸ ಎಂದರು.
ಸಾಗರ ನಗರಸಭೆ ಮಾಜಿ ಅಧ್ಯಕ್ಷೆ ಮಧುರಾ ಶಿವಾನಂದ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ರಾಮು ಕೋಹಳ್ಳಿ, ಪ್ರಮುಖರಾದ ಸುಮಲತಾ, ಸವಿತಾ ವಾಸು, ಮೈತ್ರಿ ಪಾಟೀಲ್ ಬಸವರಾಜ್, ದೊಡ್ಡಮ್ಮ, ಹರೀಶ್, ಧನರಾಜ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.