ಸುರತ್ಕಲ್ ಎನ್‌ಐಟಿಕೆ ಬೀಚ್‌ನಲ್ಲಿ ಸಮುದ್ರ ಪಾಲಾದ ಅನೀಶ್ ಮೃತದೇಹ ಪತ್ತೆ

sucide
Published on

ಮಂಗಳೂರು: ಮದುವೆಗೆಂದು ಬಂದವರು ಸಮುದ್ರದಲ್ಲಿ ಈಜಾಡುತ್ತಿದ್ದಾಗ ಮುಳುಗಿ ನಾಪತ್ತೆಯಾಗಿದ್ದ ಮದು ಮಗಳ ಸಹೋದರ ಅನೀಶ್ ಕುಲಾಲ್ (15) ಮೃತದೇಹ ಬುಧವಾರ ಬೆಳಗ್ಗೆ ಪತ್ತೆಯಾಗಿದೆ.

ಮಂಗಳವಾರ ಸಂಜೆ ಎನ್‌ಐಟಿಕೆ ಬೀಚ್‌ನಲ್ಲಿ ಸಹೋದರ ಧ್ಯಾನ್ ಬಂಜನ್ (18) ಹಾಗೂ ಅನೀಶ್ ಕುಲಾಲ್ (15) ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಈ ಪೈಕಿ ಧ್ಯಾನ್ ಬಂಜನ್‌ನನ್ನು ಜೀವ ರಕ್ಷಕ ಪ್ರದೀಪ್ ಆಚಾರ್ಯ ನೀರಿನಿಂದ ಮೇಲಕ್ಕೆ ತಂದು ಆಸ್ಪತ್ರೆಗೆ ಕಳುಹಿಸುವ ಕೆಲಸ ಮಾಡಿದ್ದರು. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.

ಅನೀಶ್‌ಗಾಗಿ ಕುಟುಂಬಸ್ಥರು ರಾತ್ರಿಯಿಡೀ ಸಮುದ್ರತೀರದಲ್ಲಿ ಉಳಿದು ಹುಡುಕಾಟ ನಡೆಸಿದ್ದರು. ಬೆಳಗ್ಗೆ ಮುಳುಗಿದ ಸ್ಥಳದ ಅನತಿ ದೂರದಲ್ಲಿ ಮೃತದೇಹ ಪತ್ತೆಯಾಯಿತು. ಪೊಲೀಸರು ಮಹಜರು ನಡೆಸಿದ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಬಿಟ್ಟುಕೊಡಲಾಯಿತು.

ಧ್ಯಾನ್ ಮತ್ತು ಅನೀಶ್ ಅವರ ಅಂತಿಮ ವಿಧಿವಿಧಾನವನ್ನು ಸೂರಿಂಜೆಯ ಮೂಲಮನೆಯಲ್ಲಿ ನೆರವೇರಿಸಿ ಸುರತ್ಕಲ್ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು. ಅನೀಶ್ ಮದುಮಗಳ ತಮ್ಮನಾಗಿದ್ದರೆ, ಧ್ಯಾನ್ ಚಿಕ್ಕಪ್ಪನ ಪುತ್ರನಾಗಿದ್ದಾನೆ. ಉಮೇಶ್ ಹಾಗೂ ವಿವೇಕ್ ಸಹೋದರರಾಗಿದ್ದು ತಮ್ಮ ತಮ್ಮ ಉದ್ಯೋಗ ನಿಮಿತ್ತ ಮುಂಬೈನಲ್ಲಿ ನೆಲೆಸಿದ್ದಾರೆ. ಬುಧವಾರ ಮೂಡುಬಿದಿರೆಯಲ್ಲಿ ವಿವಾಹ ನಡೆಯಬೇಕಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net