

ಉಡುಪಿ: ಕಳೆದ ತಿಂಗಳು ಉಡುಪಿಯಲ್ಲಿ ಭಾರಿ ಸುದ್ದಿ ಮಾಡಿದ್ದ ಎಂಬಿಎ ಪದವೀಧರೆ ಅನಿಶಾ ಪೂಜಾರಿ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವಂತೆ ಅನಿಶಾ ಅವರ ತಾಯಿ ಶುಕ್ರವಾರ ಹೈಕೋರ್ಟ್ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಆರೋಪಿ ಚೇತನ್ ಶೆಟ್ಟಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅನಿಶಾ ಆತ್ಮಹತ್ಯೆ ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡುಬಂದಿದ್ದರು ಅನುಮಾನ ವ್ಯಕ್ತಪಡಿಸಿರುವ ಅನಿಶಾ ಕುಟುಂಬ ಸಿಐಡಿ ತನಿಖೆಗೆ ಒತ್ತಾಯಿಸಿದ್ದಾರೆ.
ಘಟನೆ ಹಿನ್ನೆಲೆ ಏನು?
ಕುಂದಾಪುರದ ಸಾಯಿಬ್ರಕಟ್ಟೆ ಸಮೀಪ ಇರುವ ಕಾಜರಹಳ್ಳಿ ಎಂಬ ಕುಗ್ರಾಮದ ನಿವಾಸಿ ಅನಿಶಾ ಕಳೆದ ತಿಂಗಳು ತನ್ನ ಪ್ರಿಯಕರ ಚೇತನ್ ಶೆಟ್ಟಿ ಮನೆಯ ಆವರಣದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಳು. ಬಾಲ್ಯದಿಂದಲೂ ಕಲಿಕೆಯಲ್ಲಿ ಮುಂದಿದ್ದ ಅನಿಷಾ ಎಲ್ಲಾ ಸವಾಲುಗಳನ್ನು ಮೆಟ್ಟಿ ಎಂಬಿಎ ಮಾಡಿ ಊರಿಗೆ ಮಾದರಿಯಾಗಿದ್ದಳು. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ಕೂಡ ಈಕೆಯ ತಾಯಿ ತನ್ನ ಐವರು ಮಕ್ಕಳಿಗೂ ಉತ್ತಮ ವಿದ್ಯಾಭ್ಯಾಸ ಕೊಡಿಸಿದ್ದಾರೆ. ಆದರೆ, ಐದು ವರ್ಷಗಳ ಕೆಳಗೆ ಅನಿಶಾ ಜೀವನಕ್ಕೆ ಚೇತನ್ ಶೆಟ್ಟಿ ಪ್ರವೇಶ ಕೊಟ್ಟಿದ್ದ.
ಅನಿಶಾ ಮನೆಯಿಂದ ಎರಡು ಕಿಲೋಮೀಟರ್ ದೂರದಲ್ಲಿ ಆರೋಪಿಯ ಮನೆ ಇದೆ. ನಮ್ಮ ಊರಿನವ. ಅಲ್ಲದೆ, ಹತ್ತಿರದಲ್ಲೇ ಮನೆ ಇದ್ದುದ್ದರಿಂದ ಚೇತನ್ ಜತೆ ಅನಿಶಾ ಸ್ನೇಹ ಬೆಳಸಿದ್ದ. ಹೀಗಿರುವಾಗ ಅದೊಂದು ದಿನ ಚೇತನ್ ಪ್ರೇಮ ನಿವೇದನೆಯನ್ನು ಮಾಡಿದ್ದ. ಒಪ್ಪಿಕೊಂಡ ಅನಿಶಾ ಕೂಡ ಆತನನ್ನು ಗಾಢವಾಗಿ ಪ್ರೀತಿಸ ತೊಡಗಿದಳು. ಈ ವಿಷಯ ಅನಿಶಾ ಮನೆಯಲ್ಲಿ ತಿಳಿದು ಹುಡುಗಿಗೆ ಬುದ್ಧಿವಾದ ಹೇಳಲಾಗಿತ್ತು. ಅವನನ್ನು ಬಿಟ್ಟುಬಿಡ್ತೀನಿ ಅಮ್ಮಾ ಎಂದು ಭರವಸೆ ಸಹ ಕೊಟ್ಟಿದ್ದಳು. ಆದರೆ, ಗೌರಿ ಹಬ್ಬದ ದಿನ ಚೇತನ್ ಶೆಟ್ಟಿಯ ಮನೆಯ ಪರಿಸರಕ್ಕೆ ತೆರಳಿ ಅಲ್ಲೇ ಸಣ್ಣ ಮರವೊಂದಕ್ಕೆ ನೇಣು ಬಿಗಿದು ಬದುಕನ್ನು ಕೊನೆಗೊಳಿಸಿ ಕೊಂಡಿದ್ದಾಳೆ.
ಗೆಳತಿಯೊಬ್ಬಳ ಗೃಹಪ್ರವೇಶಕ್ಕೆ ಹೋಗಿಬರುತ್ತೇನೆಂದು ಹೊರಟಿದ್ದ ಅನಿಷಾ ಸಂಜೆಯಾದರು ಮನೆಗೆ ಬರಲಿಲ್ಲ. ಇದರ ಚಿಂತೆಯಲ್ಲಿದ್ದ ಮನೆಮಂದಿಗೆ ಅನಿಷಾಳ ಫೇಸ್ಬುಕ್ ಫೋಸ್ಟ್ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಚೇತನ್ ಒಬ್ಬ ಹೆಣ್ಣುಬಾಕ ಆತನನ್ನು ಯಾರು ನಂಬದಿರಿ ಎಂದು ಬರೆಯಲಾಗಿತ್ತು. ಅದನ್ನು ನೋಡಿದ ಅನಿಷಾ ಮನೆಯವರಿಗೆ ಆಘಾತವಾಯಿತು. ಕೂಡಲೇ ಮಗಳನ್ನು ಹುಡುಕಲು ಹೊರಟ ಹೆತ್ತವರಿಗೆ ಕಾಡಿನ ನಡುವೆ ಅನಿಷಾ ಶವವಾಗಿ ಪತ್ತೆಯಾಗಿದಳು.
ಸಾಯುವ ಮೊದಲು ನಾಲ್ಕು ಪುಟಗಳ ಡೆತ್ ನೋಟ್
ಅನಿಷಾ ಬರೆದ ಡೆತ್ನೋಟ್ ಓದಿದರೆ ಎಂಥ ಕಟುಕನ ಕಣ್ಣಾದರು ಮಂಜಾದೀತು. ಚೇತನ್ ಶೆಟ್ಟಿ, ಅನಿಶಆ ಎಂಬ ಅಮಾಯಕ ಯುವತಿಯನ್ನು ಪುಸಲಾಯಿಸಿ ಮದುವೆಯಾಗುತ್ತೇನೆ ಎಂದು ಆಕೆಯ ಜತೆ ಊರೆಲ್ಲಾ ತಿರುಗಾಡಿ ಪ್ರೀತಿ-ಪ್ರಣಯ ಅಂತ ಮಜಾ ಮಾಡಿ ಕೊನೆಗೊಮ್ಮೆ ಆಕೆಗೆ ಗುಡ್ ಬಾಯ್ ಅಂತ ಹೇಳಿ ಇನ್ನೊಂದು ಯುವತಿಯ ಜೊತೆ ಮದುವೆ ಫಿಕ್ಸ್ ಮಾಡಿಕೊಂಡಿದ್ದಾನೆಂದು ಹೇಳಲಾಗಿದೆ.
ದಯವಿಟ್ಟು ಆತನಿಗೆ ಬೇರೆ ಮದುವೆ ಮಾಡಬೇಡಿ ಐದು ವರ್ಷದಿಂದ ನನ್ನ ಜೊತೆ ಸಂಪರ್ಕದಲ್ಲಿದ್ದಾನೆ. ನನಗೆ ಅವರನ್ನು ಬಿಟ್ಟು ಬದುಕೋದಕ್ಕೆ ಸಾಧ್ಯವೇ ಇಲ್ಲ ಎಂದು ಅನಿಶಾ ಸಾಯುವ ಹಿಂದಿನ ದಿನ ಗೋಗರೆದಿದ್ದಳು. ಆದರೆ ಕಟುಕರು ಮಾತ್ರ ಬಡಪಾಯಿ ಹೆಣ್ಣುಮಗಳ ಮೇಲೆ ದಯೆ ತೋರಿಸಲೇ ಇಲ್ಲ. ಇದರಿಂದ ಮನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಇನ್ನೊಬ್ಬ ಯುವತಿ ಈ ರೀತಿಯ ಮೋಸದಾಟಕ್ಕೆ ಬಲಿಯಾಗಬಾರದು ಅದಕ್ಕಾಗಿ ನಾನು ಪ್ರಾಣ ತ್ಯಾಗ ಮಾಡುತಿದ್ದೇನೆ ಎಂದು ಅನಿಷಾ ಬರೆದುಕೊಂಡಿದ್ದಾಳೆ.
ಆರೋಪಿ ಚೇತನ್ ಶೆಟ್ಟಿ ಮತ್ತು ಆತನ ತಂದೆ ಉಮಾನಾಥ ಶೆಟ್ಟಿ ಮೇಲೆ ಬ್ರಹ್ಮಾವರ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆಯ ದೂರು ದಾಖಲಾಗಿದೆ. (ದಿಗ್ವಿಜಯ ನ್ಯೂಸ್)