

ಚಿಕ್ಕಬಳ್ಳಾಪುರ: ಹೈನುಗಾರಿಕೆಗೆ ಹೆಸರುವಾಸಿಯಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಾಸುಗಳ ಸಂಖ್ಯೆ ಇಳಿಮುಖಗೊಂಡಿರುವಿಕೆಯು ಪಶು ಸಂಗೋಪನಾ ಇಲಾಖೆಯ ಸರ್ವೆಯಿಂದ ತಿಳಿದು ಬಂದಿದೆ. ಕಳೆದ ಎರಡು ವರ್ಷದಲ್ಲಿ ಸರಾಸರಿ ೬೫ ಸಾವಿರ ರಾಸುಗಳ ಸಂಖ್ಯೆ ಜಿಲ್ಲೆಯಲ್ಲಿ ಕಡಿಮೆಯಾಗಿದ್ದು ಕಾಲುಬಾಯಿ ಜ್ವರ, ಚರ್ಮಗಂಟು ರೋಗ ಸೇರಿದಂತೆ ನಾನಾ ರೋಗಗಳು, ಸಮರ್ಪಕವಾಗಿ ಸಿಗದ ಕೂಲಿ ಕಾರ್ಮಿಕರು, ದುಬಾರಿ ಪಶು ಆಹಾರ, ಮೇವಿನ ಕೊರತೆ, ಆಗಾಗ ಕಾಡುವ ಬರ, ಹಾಲು ಉತ್ಪಾದನೆ ಪ್ರಮಾಣ ಕುಸಿತವು ಸೇರಿದಂತೆ ಹಲವು ಕಾರಣಗಳಿಂದ ರಾಸುಗಳ ಸಾಕಾಣೆಗೆ ರೈತರು ಹೆಚ್ಚಿನ ಒಲವು ತೋರುತ್ತಿಲ್ಲ ಎನ್ನಲಾಗುತ್ತಿದೆ. ಜಿಲ್ಲೆಯು ಮೊದಲಿನಿಂದಲೂ ಹೂವು, ತರಕಾರಿ ಮತ್ತು ಹಣ್ಣು ಬೆಳೆಯುವುದರಲ್ಲಿ, ರೇಷ್ಮೆ ಮತ್ತು ಹಾಲು ಉತ್ಪಾದನೆಯಲ್ಲಿ ಹೆಸರುವಾಸಿ. ಕೃಷಿಯ ಜತೆಗೆ ಹೈನುಗಾರಿಕೆ ಪ್ರಮುಖ ಕಸಬಾಗಿದೆ. ಆದರೆ, ನಿರ್ವಹಣೆ ವೆಚ್ಚ ಹೆಚ್ಚಳ, ಸಾಕಷ್ಟು ಸಮಸ್ಯೆಗಳು ಮತ್ತು ಕಡಿಮೆ ಆದಾಯದ ಹಿನ್ನೆಲೆಯಲ್ಲಿ ರಾಸುಗಳ ಸಾಕಾಣೆಯನ್ನು ಬಿಟ್ಟು, ಹೂವು ಬೆಳೆಯುವುದರತ್ತ ಮುಖ ಮಾಡಿರುವುದರ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ.
*ಮೂರು ವರ್ಷಗಳ ಲೆಕ್ಕಾಚಾರ 2019 ರಲ್ಲಿ ಜಿಲ್ಲೆಯಲ್ಲಿ ಜಾನುವಾರ ಗಣತಿ ನಡೆದಿದ್ದು ಇದರಂತೆ 2,13,815 ಹಸುಗಳು ಮತ್ತು 26,397 ಎಮ್ಮೆಗಳು ಸೇರಿದಂತೆ 2,40,212 ರಾಸುಗಳು ಇದ್ದವು. ಆದರೆ ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಪಶುಸಂಗೋಪನಾ ಇಲಾಖೆಯು ಲಸಿಕೆ ಹಾಕಲು ಮತ್ತಿತರ ವಿಚಾರಗಳಿಗೆ ರಾಸುಗಳ ಸಮೀಕ್ಷೆ ಕೈಗೊಂಡಿದ್ದು ಇದರ ಪ್ರಕಾರ ಜಿಲ್ಲೆಯಲ್ಲಿ 1.75 ಲಕ್ಷ ರಾಸುಗಳಿವೆ. ಕಳೆದ ವರ್ಷ ಸಹ ಇಲಾಖೆಗೆ 1.76 ಲಕ್ಷ ರಾಸುಗಳ ಲೆಕ್ಕಕ್ಕೆ ಸಿಕ್ಕಿತ್ತು.
*ಹೈನುಗಾರಿಕೆ ಆವಲಂಬನೆ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ವ್ಯಾಪ್ತಿಯಲ್ಲಿ 975 ಡೇರಿಗಳಿದ್ದು 1,51,836 ಸದಸ್ಯರಿದ್ದಾರೆ. ಇವರಲ್ಲಿ 51,357 ಸಣ್ಣ ರೈತರು, 53,377 ಅತಿ ಸಣ್ಣ ರೈತರು ಹಾಗೂ 26,670 ಕೃಷಿ ಕಾರ್ಮಿಕರಿದ್ದಾರೆ. ಆರ್ಥಿಕ ಲಾಭಕ್ಕಾಗಿ ಮೂಲ ಕಸಬಿನ ಜತೆಗೆ ಹೈನುಗಾರಿಕೆಯನ್ನೂ ಅವಲಂಬಿಸಿದ್ದಾರೆ. ಆದರೆ, ಈಗ ಉತ್ಪಾದನೆಯ ಹಾಲಿಗೆ ನಿರ್ವಹಣೆ ವೆಚ್ಚಕ್ಕೆ ಅನುಗುಣವಾಗಿ ದರ ಸಿಗುತ್ತಿಲ್ಲ. ಇದರ ಜತೆಗೆ ನಿರಂತರವಾಗಿ ಪಶು ಆಹಾರದ ಬೆಲೆಯೂ ಏರಿಕೆಯಾಗುತ್ತಿದೆ. ಇದರಿಂದ ಹೈನುಗಾರರು ಹಸು, ಎಮ್ಮೆಗಳ ಸಾಕಾಣಿಕೆಯಿಂದ ವಿಮುಖರಾಗುತ್ತಿದ್ದಾರೆ. ಇದು ಹಾಲಿನ ಉತ್ಪಾದನೆ ಪ್ರಮಾಣ ಕಡಿಮೆಯಾಗಲು ಕಾರಣವಾಗಿದ್ದು ಜಿಲ್ಲೆಯಲ್ಲಿ ಹಾಲು ಸಂಗ್ರಹದ ಪ್ರಮಾಣವು 3.5 ಲಕ್ಷ ಲೀಟರ್‌ಗಳಿಂದ 3 ಲಕ್ಷಕ್ಕೆ ಬಂದಿದೆ. ಇದಕ್ಕೆ ಹೈನುಗಾರಿಕೆಗೆ ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ರಾಸುಗಳಿಗೆ ಗುಣಮಟ್ಟದ ಆರೋಗ್ಯ ಸೇವೆ, ರಿಯಾಯಿತಿ ದರದಲ್ಲಿ ಪಶುಆಹಾರ, ಹಾಲಿಗೆ ಸೂಕ್ತ ಬೆಲೆ ಸಿಕ್ಕಿದಾಗ ಹೈನುಗಾರಿಕೆ ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯ್ಯವಾಗುತ್ತದೆ ಎನ್ನುತ್ತಾರೆ ರೈತರು.