

ಗುರುಪುರ: ಕೇಂದ್ರ ಮೃಗಾಲಯ ಪ್ರಾಧಿಕಾರ(ಸಿಜೆಡ್‌ಎ) ವತಿಯಿಂದ ಪಿಲಿಕುಳ ಜೈವಿಕ ಉದ್ಯಾನದಲ್ಲಿ ಆಯೋಜಿಸಲಾದ ಮೂರು ದಿನಗಳ ದಕ್ಷಿಣ ಭಾರತ ಮೃಗಾಲಯದ ಪ್ರಾಣಿ ಪರಿಪಾಲಕರ ಕಾರ್ಯಾಗಾರ ಶುಕ್ರವಾರ ಸಮಾಪನಗೊಂಡಿತು.
ವನ್ಯಜೀವಿಗಳ ಮೇಲೆ ಸಸ್ಯ ವರ್ಗದ ಪ್ರಾಮುಖ್ಯತೆ ಬಗ್ಗೆ ಪಿಲಿಕುಳ ಅರ್ಬೊರೆಟಂನ ಪ್ರಧಾನ ವಿಜ್ಞಾನಿ ಡಾ.ಸೂರ್ಯಪ್ರಕಾಶ್ ಶೆಣೈ ಗುರುವಾರ ಉಪನ್ಯಾಸ ನೀಡಿದರು. ಪಿಲಿಕುಳದ ಔಷಧೀಯ ಸಸ್ಯಗಳ ಅಧಿಕಾರಿ ಉದಯ ಕುಮಾರ್ ಶೆಟ್ಟಿ ಪಶ್ಚಿಮ ಘಟ್ಟದ ಔಷಧೀಯ ಸಸ್ಯಗಳ ಕುರಿತು ಮಾಹಿತಿ ನೀಡಿದರು.
ಕೇರಳದ ಪರಶಿನಕಡವು ಎಂವಿಆರ್ ಉರಗಗಳ ಉದ್ಯಾನದ ನಿರ್ದೇಶಕ, ಎಂವಿಆರ್ ಆಯುರ್ವೇದ ವಿಶ್ವವಿದ್ಯಾಲಯದ ಅಧ್ಯಕ್ಷ ಪ್ರೊ.ಕುಂಞ ರಾಮನ್ ‘ಮೃಗಾಲಯದಲ್ಲಿ ಸಂರಕ್ಷಿತ ನಿರ್ವಹಣೆ’ ಮತ್ತು ಉರಗಗಳ ಕಡಿತಕ್ಕೆ ಚಿಕಿತ್ಸೆ ನೀಡುವ ಬಗ್ಗೆ ಶುಕ್ರವಾರ ಉಪನ್ಯಾಸ ನೀಡಿದರು. ಪಶ್ಚಿಮ ಘಟ್ಟದ ಸರೀಸೃಪ, ಉಭಯಜೀವಿಗಳ ಬಗ್ಗೆ ಹರ್ಪೆಟೋಫೌನಾ ತಜ್ಞ ಡಾ.ಸೂರ್ಯ ಎನ್.ಆರ್. ವಿವರಣೆ ನೀಡಿದರು.
ಪಿಲಿಕುಳಕ್ಕೆ ಆಗಮಿಸಿ ವಿವಿಧ ರಾಜ್ಯಗಳ ಮೃಗಾಲಯಗಳ ಪ್ರಾಣಿ ಪಾಲಕರಿಗೆ ಪಿಲಿಕುಳ ಮೃಗಾಲಯ, ಕಾಳಿಂಗ ಸರ್ಪಗಳ ಸಂರಕ್ಷಣೆ ಮತ್ಯು ಸಂತಾನೋತ್ಪತ್ತಿ ಕೇಂದ್ರದ ಬಗ್ಗೆ ಪಶು ವೈದ್ಯಾಧಿಕಾರಿ ಡಾ.ದಿವ್ಯಾ ಜಿ., ಬಯೋಲಾಜಿಸ್ಟ್ ಕೃಷ್ಣ ಪ್ರಸಾದ್ ಕೆ.ಎಸ್., ಶಿಕ್ಷಣ ಅಧಿಕಾರಿ ಕಮಲ್ ಯಾದವ್ ಮಾಹಿತಿ ನೀಡಿದರು.
ಜೈವಿಕ ಉದ್ಯಾನದ ಸಹಾಯಕ ಇಂಜಿನಿಯರ್ ರಾಕೇಶ್ ಡಿ.ಪಿ., ಭದ್ರತಾ ಅಧಿಕಾರಿ ದಯಾ ಸಾಗರ್ ಪ್ರಾಣಿ ಪರಿಪಾಲಕರಿಗೆ ವಸತಿ ವ್ಯವಸ್ಥೆ ನಿರ್ವಹಿಸಿದರು. ಸಮಾರೋಪ ಸಮಾರಂಭದಲ್ಲಿ ಜೈವಿಕ ಉದ್ಯಾನದ ನಿರ್ದೇಶಕ ಎಚ್.ಜೆ.ಜಯಪ್ರಕಾಶ್ ಭಂಡಾರಿ ಪ್ರಾಣಿ ಪಾಲಕರಿಗೆ ಪ್ರಮಾಣಪತ್ರ ವಿತರಿಸಿದರು. ಜೈವಿಕ ಉದ್ಯಾನದ ಪಶು ವೈದ್ಯಾಧಿಕಾರಿ ಡಾ.ದಿವ್ಯಾ ಜಿ. ವಂದಿಸಿದರು.