

ಚಿಕ್ಕಬಳ್ಳಾಪುರ: ಮುಂಬರುವ ದಿನಗಳಲ್ಲಿ ಗೋವುಗಳ ವಧೆಯನ್ನು ಸಂಪೂರ್ಣ ತಡೆಗಟ್ಟುವ ವ್ಯವಸ್ಥೆಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಪಶು ಸಂಗೋಪನೆ ಸಚಿವ ಪ್ರಭುಚವ್ಹಾಣ್ ಹೇಳಿದರು. ಮುದ್ದೇನಹಳ್ಳಿಯ ಸತ್ಯಸಾಯಿ ಲೋಕಸೇವಾ ಸಂಸ್ಥೆಯ ಗೋಶಾಲೆಗೆ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಪೂಜಿಸಲ್ಪಡುವ ಗೋವುಗಳು ಕಸಾಯಿಖಾನೆಗಳ ಪಾಲಾಗುವುದನ್ನು ತಪ್ಪಿಸಿ, ರಕ್ಷಿಸುವುದೇ ಧ್ಯೇಯವಾಗಿದೆ. ಈಗಾಗಲೇ ಪಾಲನೆಗೆ ಸರ್ಕಾರವೇ ಗೋಶಾಲೆಗಳನ್ನು ತೆರೆದಿದೆ ಎಂದರು.
ಇಲ್ಲಿಯವರೆಗೂ 20 ಸಾವಿರಕ್ಕೂ ಮೇಲ್ಪಟ್ಟು ಜಾನುವಾರುಗಳನ್ನು ರಕ್ಷಿಸಿದ್ದು, ಅಕ್ರಮ ಸಾಗಣೆಗೆ ಸಂಬಂಧಿಸಿದಂತೆ 900 ಪ್ರಕರಣ ದಾಖಲಿಸಲಾಗಿದೆ. ಬಕ್ರೀದ್ ಸಂದರ್ಭದಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಶೇ.60 ಗೋವುಗಳು ಕಸಾಯಿಖಾನೆ ಪಾಲಾಗುವುದನ್ನು ತಪ್ಪಿಸಲಾಗಿದೆ. ಇದಕ್ಕೆ ಅನೇಕ ಜಾನುವಾರು ಪ್ರಿಯರು ಸಂತಸ ವ್ಯಕ್ತಪಡಿಸಿದ್ದಾರೆ ಎಂದರು.
ಪಶು ಸಹಾಯವಾಣಿ, ಪ್ರಾಣಿ ಕಲ್ಯಾಣ ಮಂಡಳಿ, ಗೋಹತ್ಯೆ ನಿಷೇಧ ಕಾಯ್ದೆ, ಪಶು ಸಂಜೀವಿನಿ ಆಂಬುಲೆನ್ಸ್, ಸಂಚಾರಿ ಪಶು ಚಿಕಿತ್ಸಾ ವಾಹನ, ಗೋಶಾಲೆಗಳ ನಿರ್ಮಾಣ, ನೂತನ ಪಶು ಚಿಕಿತ್ಸಾಲಯಗಳ ಪ್ರಾರಂಭ, ನಾಡಿನ ಜನರ ಉಪಕಸುಬಾದ ಹೈನುಗಾರಿಕೋದ್ಯಮದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಸರ್ಕಾರಿ ಗೋಶಾಲೆಗಳನ್ನು ಆತ್ಮನಿರ್ಭರ ಗೋಶಾಲೆಗಳನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ ಎಂದರು.
ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ: ಪ್ರವೀಣ್ ಕೊಲೆ ನೋವಿನ ಸಂಗತಿ. ಈಗಾಗಲೇ ಮೃತನ ಕುಟುಂಬಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಂತ್ವನ ಹೇಳಿ, ಅಗತ್ಯ ನೆರವು ನೀಡಿದ್ದಾರೆ. ಹಾಗೆಯೇ ತ್ವರಿತವಾಗಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ಕ್ರಮ ಕೈಗೊಳ್ಳಲಿದ್ದಾರೆ. ದುರ್ಘಟನೆ ಹಿನ್ನೆಲೆಯಲ್ಲಿ ಬೇಸರಗೊಂಡು ಬಿಜೆಪಿ ಮುಖಂಡರು ರಾಜೀನಾಮೆ ನೀಡುತ್ತಿರುವ ಸಮಸ್ಯೆ ಬಗೆಹರಿಯಲಿದೆ ಎಂದು ಸಚಿವರು ತಿಳಿಸಿದರು.
ಗೋವಿನ ಪೂಜೆ: ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಯ ಗೋಶಾಲೆಯಲ್ಲಿ ಸಚಿವರು ಗೋಪೂಜೆ ಸಲ್ಲಿಸಿದರು. ಉತ್ತಮ ನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಸದ್ಗುರು ಶ್ರೀ ಮಧುಸೂದನ ಸಾಯಿ ಅವರೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಸತ್ಯ ಸಾಯಿ ಲೋಕ ಸೇವಾ ಗುರುಕುಲ ಸಂಸ್ಥೆಗಳ ಪ್ರಧಾನ ಸಂಪರ್ಕಾಧಿಕಾರಿ ಪಿ.ವಿ ಗೋವಿಂದರೆಡ್ಡಿ ಮತ್ತಿತರರು ಇದ್ದರು.