

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯಾದ್ಯಂತ ಜಾನುವಾರು ಗಣತಿ ಪ್ರಗತಿಯಲ್ಲಿದ್ದು, ಫೆ. 28ರೊಳಗೆ ಪೂರ್ಣಗೊಳಿಸಬೇಕು ಎಂದು ಪಶು ಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ ಅವರು ಅಧಿಕಾರಿಗಳಿಗೆ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಧಾರವಾಡ, ಗದಗ, ಹಾವೇರಿ ಜಿಲ್ಲೆಗಳ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಹಲವು ಜಿಲ್ಲೆಗಳಲ್ಲಿ ಈ ವರೆಗೆ ಶೇ. 70ರಷ್ಟು ಗಣತಿ ಆಗಿದೆ. ಉಳಿದ ಕಾರ್ಯವನ್ನು ಶ್ರೀ ಪೂರ್ಣಗೊಳಿಸಬೇಕು. ಕೆಲವೆಡೆ ದಾಖಲೀಕರಣದ ಸರ್ವರ್ ಸಮಸ್ಯೆ, ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಎಲ್ಲವನ್ನು ಸರಿಪಡಿಸಿಕೊಂಡು ಕಾಲಮಿತಿಯಲ್ಲಿ ಪೂರ್ತಿ ಮಾಡಲು ಆದೇಶಿಸಿದರು.
ಜಾನುವಾರು ಗಣತಿಯಲ್ಲಿ ಗದಗ ಜಿಲ್ಲೆಯು ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಈಗಾಗಲೇ ಶೇ. 95ರಷ್ಟು ಕಾರ್ಯವಾಗಿದೆ. ಇನ್ನೆರಡು ದಿನದಲ್ಲಿ ಪೂರ್ಣಗೊಳ್ಳಲಿದೆ ಎಂದು ಜಿಲ್ಲೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಕಾಯಿಲೆ ಇಲ್ಲ: ಮೂರು ಜಿಲ್ಲೆಗಳಲ್ಲಿ ಜಾನುವಾರು ಕಾಯಿಲೆಗಳು ಕಂಡು ಬಂದಿಲ್ಲ. ಕಾಲಕಾಲಕ್ಕೆ ಲಸಿಕೆ ನೀಡುವುದು, ತಪಾಸಣೆ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
700 ಸಿಬ್ಬಂದಿ ನೇಮಕ:
ಪಶು ಸಂಗೋಪನೆ ಇಲಾಖೆಗೆ ಈಗಾಗಲೇ 400 ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಇನ್ನೂ 400 ವೈದ್ಯರ ನೇಮಕಕ್ಕೆ ಕೆಪಿಎಸ್ಸಿಯವರಿಗೆ ನೀಡಲಾಗಿದೆ. ಅವರು ಪರೀಕ್ಷೆ ನಡೆಸಿ ಏಪ್ರಿಲ್ ವೇಳೆಗೆ ನೇಮಕ ಪೂರ್ಣಗೊಳಿಸುವರು ಎಂದು ಸಚಿವ ಕೆ. ವೆಂಕಟೇಶ ಸುದ್ದಿಗಾರರಿಗೆ ತಿಳಿಸಿದರು.
ಉಳಿದಂತೆ 200 ಇನ್ಸಪೆಕ್ಟರ್, 700 ಡಿ ದರ್ಜೆ ನೌಕರರ ನೇಮಕಾತಿ ಪ್ರಕ್ರಿಯೆಯನ್ನು ಏಪ್ರಿಲ್ ವೇಳೆಗೆ ಪೂರ್ತಿ ಮಾಡಲಾಗುವುದು ಎಂದರು.
ಹಾವೇರಿ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ರೇಷ್ಮೆ ಬೆಳೆಯುವ ರೈತರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕಾಗಿ ಹಾವೇರಿಯಲ್ಲಿ 15 ಕೋಟಿ ರೂ. ವೆಚ್ಚದ ಹೈ ಟೆಕ್ ಮಾರುಕಟ್ಟೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಸೆಪ್ಟೆಂಬರ್ ವೇಳೆಗೆ ಉದ್ಘಾಟನೆಗೆ ಸಜ್ಜಾಗಲಿದೆ. ರೇಷ್ಮೆ ಬೆಳೆಯಲು ಮುಂದೆ ಬರುವ ರೈತರಿಗೆ ಎಲ್ಲ ರೀತಿಯ ಅನುಕೂಲ ಮಾಡಿಕೊಡಲಾಗುವುದು. ತರಬೇತಿ ಸಹ ನೀಡಲಾಗುವುದು. ಬೆಳೆಗಾರರು ಇದರ ಪ್ರಯೋಜನ ಪಡೆಯಬೇಕೆಂದು ಕೋರಿದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಪಶು ಸಂಗೋಪನೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಶ್ರೀ ಭರ್ತಿ ಮಾಡಬೇಕು, ಸ್ಥಳಿಯರಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಇಲಾಖೆಯ ಅಧಿಕಾರಿಗಳು ಹಾಜರಿದ್ದರು.