ಪ್ರಾಣಿಗಳ ಕಾಯಿಲೆಗೆ ಚಿಕಿತ್ಸೆ ನೀಡುವರಿಲ್ಲ

JLR ph 1 Jun 17 Focus Story
Published on

ಲೋಕೇಶ್.ಎಂ ಐಹೊಳೆ ಜಗಳೂರು

ಮಳೆಗಾಲದಲ್ಲಿ ಜಾನುವಾರುಗಳಿಗೆ ಬರುವ ಕಾಲುಬಾಯಿ ರೋಗ ಸೇರಿ ಇತರೆ ಎಲ್ಲ ರೀತಿಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಪಶುಸಂಗೋಪನಾ ಇಲಾಖೆಯಡಿಯಲ್ಲಿರುವ ತಾಲೂಕಿನ ಪಶು ಆಸ್ಪತ್ರೆ, ಚಿಕಿತ್ಸಾ ಕೇಂದ್ರಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ತೀವ್ರವಾಗಿ ಕಾಡುತ್ತಿದೆ.

ಜಗಳೂರು ಪಟ್ಟಣ, ಬಿಳಿಚೋಡು, ಸೊಕ್ಕೆಯಲ್ಲಿ ಪಶು ಆಸ್ಪತ್ರೆಗಳಿವೆ. ಅಸಗೋಡು, ಪಲ್ಲಾಗಟ್ಟೆ, ದೇವಿಕೆರೆ, ಬಿದರಕೆರೆ, ತೋರಣಗಟ್ಟೆ ಸೇರಿ 6 ಪಶು ಚಿಕಿತ್ಸಾಲಯಗಳಿವೆ. ಹಾಲೇಕಲ್ಲು, ಬಸವನಕೋಟೆ, ಹೊಸಕೆರೆ, ಮಲ್ಲಾಪುರ, ಹುಚ್ಚವ್ವನಹಳ್ಳಿ, ಮುಸ್ಟೂರು, ಕಲ್ಲೇದೇವರಪುರದಲ್ಲಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಿವೆ.

ಈ ಮೂರು ಹಂತಗಳ ಪಶುಸಂಗೋಪನಾ ಇಲಾಖೆಯ 16 ಸಂಸ್ಥೆಯಲ್ಲಿ ಮಂಜೂರಾತಿ ಹುದ್ದೆಗಳು 66 ಇವೆ. ಅದರಲ್ಲಿ ವೈದ್ಯರು, ಸಿಬ್ಬಂದಿಯ ಒಟ್ಟು 48 ಹುದ್ದೆಗಳು ಖಾಲಿಯಾಗಿದ್ದು, ತುರ್ತು ಸೇವೆಗೆ ಪರದಾಡುವ ಸ್ಥಿತಿ ಇದೆ. ಜತೆಗೆ ಮೂಲ ಸೌಕರ್ಯಗಳ ವ್ಯವಸ್ಥೆ ಇಲ್ಲದೆ ಪಶು ಮತ್ತು ಇತರೆ ಪ್ರಾಣಿಗಳ ಸಾಕಾಣಿಕೆದಾರರು ನಿತ್ಯ ಅಲೆದಾಡುತ್ತಿದ್ದಾರೆ. ಕೂರಲು ಆಸನ, ಕುಡಿಯಲು ನೀರು, ಶೌಚಗೃಹಗಳಿಲ್ಲ. ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತೆ ಇಲ್ಲದೇ ಧೂಳು ತುಂಬಿದೆ.

ದನ 23,684, ಎಮ್ಮೆ 10,053, ಕುರಿ 1,09,515, ಆಡು 20,045, ನಾಯಿ 4,014, ಕೋಳಿ 8,87,415, ಮೊಲ 10, ಬೀದಿ ನಾಯಿ 6,954, ಬೀದಿ ದನ 113 ಸೇರಿ ಒಟ್ಟು 6,61,803 ಪ್ರಾಣಿಗಳಿರುವುದು ವರದಿಯಾಗಿದೆ. ಪ್ರತಿ ವರ್ಷ ವಿವಿಧ ರೋಗಗಳಿಂದ ಸಾವಿರಾರು ಪ್ರಾಣಿಗಳು ಸಾಯುತ್ತಿವೆ. ವರ್ಷಕ್ಕೆ ಕನಿಷ್ಠ ಎರಡ್ಮೂರು ಬಾರಿಯಾದರೂ ಲಸಿಕೆ, ಚುಚ್ಚು ಮದ್ದುಗಳನ್ನು ನೀಡಬೇಕು. ಈಗಿರುವ ವೈದ್ಯರು ಮತ್ತು ಸಿಬ್ಬಂದಿಯಿಂದ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪ್ರತಿ ವರ್ಷ ಸಾವಿರಾರು ಕುರಿ, ಮೇಕೆ, ದನಗಳು ಸಾವಿಗೆ ತುತ್ತಾಗುತ್ತಿವೆ. ಸರ್ಕಾರ ಗಮನಹರಿಸಿ ಸಮಸ್ಯೆಗೆ ಸೂಕ್ತ ಪರಿಹಾರ ನೀಡಬೇಕು ಎನ್ನುತ್ತಾರೆ ರೈತ ಗುರುಸಿದ್ದಪ್ಪ.

ಶೂನ್ಯ ಸಿಬ್ಬಂದಿ: ತಾಲೂಕಿನ ಸೊಕ್ಕೆ ಗ್ರಾಮದ ಪಶು ಆಸ್ಪತ್ರೆ, ಅಣಬೂರು ಮತ್ತು ತೋರಣಗಟ್ಟೆಯ ಪಶು ಚಿಕಿತ್ಸಾಲಯ, ಬಸವನಕೋಟೆ ಪ್ರಾಥಮಿಕ ಪಶು ಚಿಕಿತ್ಸಾಲಯ, ಮುಸ್ಟೂರು ಪ್ರಾಥಮಿಕ ಚಿಕಿತ್ಸಾಲಯ ಈ ಐದು ಆಸ್ಪತ್ರೆಗಳಲ್ಲಿ ಒಬ್ಬ ನೌಕರನೂ ಇಲ್ಲ. ಇವುಗಳಿಗೆಲ್ಲಾ ಗ್ರಾಮಸ್ಥರೇ ವೈದ್ಯರು, ಸಿಬ್ಬಂದಿಗಳಾದಂತಾಗಿದೆ.

ಶಿಥಿಲಗೊಂಡ ಕಟ್ಟಡಗಳು: ಹುಚ್ಚವ್ವನಹಳ್ಳಿ, ಬಸವನಕೋಟೆ, ಹಾಲೇಕಲ್ಲು, ತೋರಣಗಟ್ಟೆ, ಜಗಳೂರು ಸೇರಿ ಒಟ್ಟು 6 ಆಸ್ಪತ್ರೆಗಳ ಕಟ್ಟಡಗಳು ಶಿಥಿಲಾವಸ್ಥೆ ತಲುಪಿದೆ. ಕಿಟಕಿ, ಬಾಗಿಲು ಮುರಿದು ಹಾಳಾಗಿವೆ, ಗೋಡೆ ಬಿರುಕು ಬಿಟ್ಟಿವೆ. ಆದಷ್ಟು ಬೇಗ ದುರಸ್ತಿ ಪಡಿಸಬೇಕು ಇಲ್ಲವೇ ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣ ಮಾಡಬೇಕು ಎನ್ನುತ್ತಾರೆ ಸಾರ್ವಜನಿಕರು.

ಪೂರ್ಣ ಪ್ರಮಾಣದಲ್ಲಿ ವೈದ್ಯ, ಸಿಬ್ಬಂದಿಯಿದ್ದರೇ ಕೆಲಸ ಮಾಡುವುದು ಕಷ್ಟವಾಗಿದೆ. ಆದರೆ ಕೇವಲ ಶೇ.30 ನೌಕರರನ್ನಿಟ್ಟುಕೊಂಡು ತಾಲೂಕು ನಿಭಾಯಿಸುವುದು ಅಸಾಧ್ಯ. 5 ಆಸ್ಪತ್ರೆಗಳಲ್ಲಿ ಒಬ್ಬ ಸಿಬ್ಬಂದಿ ಇಲ್ಲ, ಆದರೆ ಆ ಭಾಗದ ರೈತರ ಸಮಸ್ಯೆಗಳಿಗೆ ಕಿವಿಗೊಡಲೇಬೇಕು. ಇದರಿಂದ ವೈದ್ಯರ ಮೇಲೆ ಒತ್ತಡ ಬೀಳುತ್ತಿದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. ಕೆಲವು ಕಟ್ಟಡಗಳನ್ನು ನವೀಕರಣ ಮಾಡಲಾಗಿದೆ. | ಡಾ. ಲಿಂಗರಾಜ್, ಸಹಾಯಕ ನಿರ್ದೇಶಕ, ಪಶು ಆಸ್ಪತ್ರೆ ಜಗಳೂರು.

ಪ್ರಾಣಿಗಳಿಗೆ ಬಾಧಿಸುವ ರೋಗಗಳಿಗೆ ಸರ್ಕಾರದಿಂದ ಲಸಿಕೆ, ಚುಚ್ಚು ಮದ್ದು ನೀಡಲಾಗುತ್ತಿದೆ. ಆದರೆ ತಾಲೂಕು, ಹೋಬಳಿ ಮಟ್ಟದ ಪಶು ಆಸ್ಪತ್ರೆಗಳಲ್ಲಿ ಲಸಿಕೆ, ಔಷಧೋಪಚಾರಗಳು ವಿತರಣೆಯಾಗುತ್ತಿಲ್ಲ. ಹಾಗಾಗಿ ಜಾನುವಾರುಗಳಿಗೆ ಸರ್ಕಾರದಿಂದ ಕೊಡುವ ಸೌಲಭ್ಯಗಳನ್ನು ಸಮರ್ಪಕವಾಗಿ ವಿತರಣೆ ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. | ಟಿ. ಹೊನ್ನೂರ್ ಸಾಬ್.

ಪಶು ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ನಿರೀಕ್ಷೆ ಹುಸಿಯಾಗಿದೆ. ಅನಾರೋಗ್ಯ, ಅಪಘಾತಕ್ಕೆ ಒಳಗಾದ ಪ್ರಾಣಿಗಳನ್ನು ಕರೆದೊಯ್ದರೆ ವೈದ್ಯರು, ಸಿಬ್ಬಂದಿ ಸರಿಯಾಗಿ ಸ್ಪಂದಿಸುವುದಿಲ್ಲ. ಒಮ್ಮೊಮ್ಮೆ ಗಂಟೆಗಟ್ಟಲೆ ಕಾದರೂ ತಪಾಸಣೆ ಮಾಡುವುದಿಲ್ಲ. ಕೇವಲ ಸಿಬ್ಬಂದಿ ಕೊರತೆ ಹೇಳಿಕೊಂಡು ದಿನ ದೂಡುತ್ತಿದ್ದಾರೆ. ಇದ್ದ ನೌಕರರೇ ಪ್ರಾಮಾಣಿಕತೆಯಿಂದ ಸೇವೆ ಮಾಡಿದರೆ ಪ್ರಾಣಿಗಳ ಜೀವ ಉಳಿಸಬಹುದು. | ಕಾನನಕಟ್ಟೆ ತಿಪ್ಪೇಸ್ವಾಮಿ, ರೈತ ಮುಖಂಡ ಜಗಳೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net