ಪಶುವೈದ್ಯಕೀಯ ಇಲಾಖೆಯ ಕೊರತೆ ತುಂಬಲು ಕ್ರಮ; ಕಚೇರಿಯ ನೂತನ ಕಟ್ಟಡ ಉದ್ಘಾಟಿಸಿ ಸಚಿವ ದಿನೇಶ್ ಗುಂಡೂರಾವ್ ಭರವಸೆ
ಮಂಗಳೂರು ಕೊಡಿಯಾಲ್‌ಬೈಲ್ ಜೈಲ್‌ರೋಡ್‌ನಲ್ಲಿ ನಿರ್ಮಾಣಗೊಳ್ಳಲಿರುವ ಪಶುವೈದ್ಯಕೀಯ ಸೇವಾ ಇಲಾಖೆಯ ದಕ್ಷಿಣ ಕನ್ನಡ ನೂತನ ಕೇಂದ್ರ ಕಚೇರಿಯ ಕಟ್ಟಡದ ಶಿಲಾನ್ಯಾಸವನ್ನು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ನೆರವೇರಿಸಿದರು. ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್, ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದ್ ಕೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಜಿಲ್ಲಾ ಉಪನಿರ್ದೇಶಕ (ಆಡಳಿತ) ಡಾ.ಅರುಣ್ ಕುಮಾರ್ ಶೆಟ್ಟಿ ಎನ್ ಮುಂತಾದವರು ಉಪಸ್ಥಿತರಿದ್ದರು.
ಪಶು ವೈದ್ಯಾಧಿಕಾರಿಗಳು ಸಹಿತ ಇಲಾಖೆಯಲ್ಲಿ ಇರುವ ಕೊರತೆಯನ್ನು ತುಂಬುವ ನಿಟ್ಟಿನಲ್ಲಿ ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಹಾಗೂ ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಅವರ ಜತೆ ಸಮಾಲೋಚನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ.
ನಗರದ ಕೊಡಿಯಾಲ್‌ಬೈಲ್ ಜೈಲ್‌ರೋಡ್ ನಲ್ಲಿ ಸುಮಾರು 250 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ದಕ್ಷಿಣ ಕನ್ನಡ ಕೇಂದ್ರ ಕಚೇರಿಯ ಕಟ್ಟಡದ ಶಿಲಾನ್ಯಾಸವನ್ನು ಮಂಗಳವಾರ ನೆರವೇರಿಸಿ ಅವರು ಮಾತನಾಡಿದರು.
ಪಶುಸಂಗೋಪನೆಯು ಅತ್ಯಂತ ಮಹತ್ವದ ಇಲಾಖೆಯಾಗಿದೆ. ಜಗತ್ತಿನ ಶೇ.62 ರಷ್ಟಿರುವ ಸಾಕುಪ್ರಾಣಿಗಳನ್ನು ಮನುಷ್ಯ ತನ್ನ ಸ್ವಂತ ಲಾಭಕ್ಕಾಗಿಯೇ ಉಪಯೋಗಿಸುತ್ತಿದ್ದಾನೆ. ಪ್ರಾಣಿಗಳ ಪಾಲನೆ ನಮ್ಮ ಆದ್ಯತೆಯಾಗಬೇಕು ಎಂದು ಅವರು ಹೇಳಿದರು.
ಖಾಸಗಿ ಪಶು ವೈದ್ಯಕೀಯ ಕಾಲೇಜು ಚಿಂತನೆ ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಪಶುವೈದ್ಯಾಧಿಕಾರಿಗಳ ಕೊರತೆ ಗಮನಾರ್ಹ ಪ್ರಮಾಣದಲ್ಲಿ ಇದ್ದು, ಈ ಕೊರತೆ ತುಂಬಲು ಖಾಸಗಿ ಪಶುವೈದ್ಯಕೀಯ ಕಾಲೇಜುಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸುವ ಕುರಿತು ಚಿಂತನೆ ನಡೆಸಬೇಕಾಗಿದೆ ಎಂದರು. ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಧ್ಯಕ್ಷತೆ ವಹಿಸಿದ್ದರು.
ಸ್ವಾತಂತ್ರೃ ಪೂರ್ವದ ಕಟ್ಟಡ ಪ್ರಸ್ತಾವನೆಗೈದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಜಿಲ್ಲಾ ಉಪನಿರ್ದೇಶಕ (ಆಡಳಿತ) ಡಾ.ಅರುಣ್ ಕುಮಾರ್ ಶೆಟ್ಟಿ ಎನ್ ಅವರು, ಮಂಗಳೂರಿನಲ್ಲಿ ಜಿಲ್ಲಾ ಉಪನಿರ್ದೇಶಕರ ಕಚೇರಿಯು 1946, ಜನವರಿ 5 ರಂದು ಪ್ರಾರಂಭಗೊಂಡಿದ್ದು, ಈಗ ಇರುವ ಕಟ್ಟಡವು ಸುಮಾರು 75 ವರ್ಷಕ್ಕಿಂತ ಹಳೆಯದಾಗಿರುವುದರಿಂದ ಹೊಸ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದರು.
ಬಹುತೇಕ ಹುದ್ದೆ ಖಾಲಿ ಜಿಲ್ಲೆಯಲ್ಲಿ ಒಟ್ಟು 107 ಪಶು ವೈದ್ಯಕೀಯ ಸಂಸ್ಥೆಗಳಿವೆ. ಒಟ್ಟು 448 ಹುದ್ದೆಗಳು ಮಂಜೂರಾಗಿದ್ದು, 98 ಭರ್ತಿಯಾಗಿ 350 ಹುದ್ದೆಗಳು ಖಾಲಿ ಇವೆೆ. ವಿಶೇಷವಾಗಿ ಮಂಜೂರಾದ ಪಶುವೈದ್ಯರ ಹುದ್ದೆಯಲ್ಲಿ 33 ಜನ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 41 ಹುದ್ದೆ ಖಾಲಿ ಇರುತ್ತದೆ ಎಂದು ವಿವರಿಸಿದರು. ತಾಲೂಕಿಗೆ ಒಂದರಂತೆ ಪಶು ಸಂಜೀವಿನಿ ತುರ್ತು ಚಿಕಿತ್ಸಾ ಘಟಕ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಪಂಚಾಯಿತಿಗೆ ಒಬ್ಬರಂತೆ ಒಟ್ಟು 223 ಪಶು ಸಖಿಯರು ಇಲಾಖೆ ಮತ್ತು ರೈತರ ನಡುವೆ ಕೊಂಡಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು. ಪಾಲಿಕೆ ಪ್ರತಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದ್ ಕೆ, ಮಂಗಳೂರು ಪಶುರೋಗ ತಪಾಸಣಾ ಕೇಂದ್ರದ ಪ್ರಾದೇಶಿಕ ಸಂಶೋಧನಾ ಅಧಿಕಾರಿ ಡಾ.ವಸಂತ ಶೆಟ್ಟಿ, ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಡಿಎಂಓ ಡಾ.ಜೆಸಿಂತಾ ಉಪಸ್ಥಿತರಿದ್ದರು. ಸ್ಥಳೀಯ ಶಾಸಕ ಡಿ.ವೇದವ್ಯಾಸ ಕಾಮತ್ ಸ್ಥಳಕ್ಕೆ ಭೇಟಿ ನೀಡಿದರು.