ಆನೆ-ಮಾನವ ಸಂಘರ್ಷಕ್ಕಿಲ್ಲ ಕಡಿವಾಣ

Oplus_131072
Oplus_131072
Published on

ಮಡಿಕೇರಿ:

ಕೊಡಗಿನಲ್ಲಿ ಆನೆ-ಮಾನವ ಸಂಘರ್ಷ ಸಾಮಾನ್ಯ ಎಂಬAತಾಗಿದೆ. ಮೊದಲೆಲ್ಲ ವರ್ಷದ ಕೆಲವೊಂದು ತಿಂಗಳಿಗೆ ಮಾತ್ರ ಸೀಮಿತ ಆಗಿರುತ್ತಿದ್ದ ಆನೆಗಳ ಹಾವಳಿ ಈಗ ವರ್ಷ ಪೂರ್ತಿ ಕಂಡುಬರುತ್ತಿದೆ. ಇದರಿಂದಾಗಿ ಕಾಡಂಚಿನ ರೈತರು ಯಾವ ಬೆಳೆಯನ್ನೂ ಬೆಳೆಯಲು ಸಾಧ್ಯ ಆಗುತ್ತಿಲ್ಲ. ಬಹುತೇಕರು ಭತ್ತದ ಬೇಸಾಯವನ್ನೇ ಕೈ ಬಿಟ್ಟಿದ್ದಾರೆ. ಕೃಷಿ ಮಾತ್ರವಲ್ಲದೆ ಜನಜೀವನದ ಮೇಲೆಯೂ ಇದರಿಂದ ದುಷ್ಟರಿಣಾಮಗಳು ಕಂಡುಬರುತ್ತಿದೆ.

ಅರಣ್ಯ ಇಲಾಖೆ ಮೂಲಕ ಸರ್ಕಾರವೂ ಆನೆ-ಮಾನವ ಸಂಘರ್ಷ ತಡೆಗೆ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಅರಣ್ಯದ ಅಂಚಿನಲ್ಲಿ ಕಂದಗಳ ನಿರ್ಮಾಣದಂಥ ಸಾಂಪ್ರದಾಯಿಕ ಪದ್ಧತಿಗಳಿಂದ ಆರಂಭವಾಗಿ ಸೋಲಾರ್ ಬೇಲಿ ನಿರ್ಮಾಣ, ಹ್ಯಾಂಗಿAಗ್ ಸೋಲಾರ್ ಬೇಲಿ, ರೈಲ್ವೆ ಹಳಿಗಳ ಬೇಲಿ ನಿರ್ಮಾಣ ಹೀಗೆ ಹಲವು ರೀತಿಯ ಪ್ರಯತ್ನಗಳನ್ನು ಮಾಡುವ ಮೂಲಕ ಆನೆ ಹಾವಳಿ ತಡೆಗೆ ಪ್ರಯತ್ನ ಮುಂದುವರಿದಿದೆ. ಈಚೆಗೆ ಜೇನು ನೊಣಗಳ ಬೇಲಿಯ ಪ್ರಯೋಗವನ್ನೂ ನಡೆಸಲಾಗಿದೆ. ಆದರೆ ಯಾವುದು ಕೂಡ ನಿರೀಕ್ಷಿತ ಫಲ ಕೊಡುತ್ತಿಲ್ಲ.

ಮತ್ತೊಂದು ಕಡೆ ಕೊಡಗಿನಲ್ಲಿ ಕಾಡಾನೆಗಳಂತೆ ತೋಟದ ಆನೆಗಳು ಎನ್ನುವ ಪ್ರತ್ಯೇಕ ಆನೆಗಳ ಗುಂಪು ಕಂಡು ಬರುತ್ತಿದೆ. ಈ ಆನೆಗಳ ಬಹುತೇಕ ಜೀವನ ಚಕ್ರವೆಲ್ಲಾ ತೋಟಗಳಲ್ಲೇ ಕಳೆದು ಹೋಗುತ್ತದೆ. ಇವುಗಳ ಉಪಟಳ ಹೆಚ್ಚಾದಗಲೆಲ್ಲಾ 'ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ' ಎನ್ನುವ ಪ್ರಯತ್ನವನ್ನು ಅರಣ್ಯ ಇಲಾಖೆ ಮಾಡುತ್ತಾ ಬಂದಿದೆ. ಆದರೆ ಈ ಸಂದರ್ಭ ಆನೆಗಳು ಒಬ್ಬರ ತೋಟದಿಂದ ಮತ್ತೊಬ್ಬರ ತೋಟಕ್ಕೆ ತೆರಳುತ್ತವೆಯೇ ಹೊರತೂ ಬೇರೇನು ಪ್ರಯೋಜನ ಇಲ್ಲ ಎನ್ನುವ ಆರೋಪಗಳು ಇವೆ. ಈ ಎಲ್ಲಾ ವಿಷಯಗಳ ಬಗ್ಗೆ ವಿಜಯವಾಣಿ ಓದುಗರು ಲೌಡ್‌ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.

ಹಲವು ವರ್ಷಗಳಿಂದಲೂ ಆನೆ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಇಲ್ಲದಂತಾಗಿದೆ. ಕಾಡು ಪ್ರಾಣಿಗಳು ಸುತ್ತಮುತ್ತಲ ಗ್ರಾಮ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬಿಡು ಬಿಟ್ಟು ಕೃಷಿ ಫಸಲು ನಾಶ ಮಾಡುವುದರ ಮೂಲಕ ಕಾರ್ಮಿಕರು, ಬೆಳೆಗಾರರು, ಶಾಲಾ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿ ಮಾಡುತ್ತಿವೆ.

ಅರಣ್ಯ ಇಲಾಖೆ ಶಾಶ್ವತ ಯೋಜನೆ ರೂಪಿಸದೇ ಕಾಟಾಚಾರಕ್ಕೆ ಕಾಫಿ ತೋಟದಿಂದ ಕಾಡಿಗಟ್ಟುವ ಕಾರ್ಯಾಚರಣೆ ಮಾಡುತ್ತಿದೆ. ಇದರಿಂದ ಯಾವುದೇ  ಪ್ರಯೋಜನ ಇಲ್ಲದಂತಾಗಿದೆ.

ಮಹದೇವ್, ಕಾರ್ಮಿಕ ಮುಖಂಡ, ಸಿದ್ದಾಪುರ

ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ರೈತರು ಸಂಕಷ್ಟದಲ್ಲಿ ದಿನದೂಡುವಂತೆ ಆಗಿದೆ. ನಮ್ಮ ವ್ಯಾಪ್ತಿಯಲ್ಲಂತೂ ಕಾಡಾನೆಗಳ ಹಾವಳಿಯಿಂದ ಭತ್ತದ ಬೇಸಾಯವನ್ನೇ ರೈತರು ಕೈ ಬಿಟ್ಟಿದ್ದಾರೆ. ಕಾಡಾನೆಗಳನ್ನು ಶಾಶ್ವತವಾಗಿ ಕಾಡಿಗಟ್ಟುವ ಕೆಲಸ ಆಗಬೇಕು. ಒಂದು ತೋಟದಿಂದ ಓಡಿಸಿದರೆ ಅವು ಮತ್ತೊಂದೆಡೆ ಹೋಗಿ ಸೇರಿಕೊಳ್ಳುತ್ತವೆ. ಇದಕ್ಕೆ ಶಾಶ್ವತ ಪರಿಹಾರದ ಅಗತ್ಯವಿದೆ.

ಸಣ್ಣುವಂಡ ರಮೇಶ್, ಕೃಷಿಕ, ಮಾಯಮುಡಿ

ಕೊಡಗಿನಲ್ಲಿ ಪ್ರತಿ ವರ್ಷ ಆನೆ ಮಾನವ ಸಂಘರ್ಷ ತಪ್ಪುತ್ತಿಲ್ಲ. ರೈತರ ಬೆಳೆಗಳ ಮೇಲೆ ನಿರಂತರ ದಾಳಿ ಮಾಡಿ ನಷ್ಟ ಮಾಡುತ್ತಿದೆ. ಪ್ರತಿ ಸರ್ಕಾರ ಬಂದಾಗ ರೈತರಿಗೆ ಒಂದಷ್ಟು ಪರಿಹಾರ ನೀಡಿ ಮೌನವಾಗುತ್ತಿವೆ. ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆ ನಡೆಸುತ್ತಾರೆ. ಆದರೆ ಆ ಕಾಡಾಡನೆಗಳನ್ನು ಅಟ್ಟುವುದು ಎಲ್ಲಿಗೆ ಎಂದು ಇಂದಿಗೂ ತಿಳಿಯುತ್ತಿಲ್ಲ. ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುತ್ತಾರೆ. ಮತ್ತೆ ಅದು ಎಂದಿನAತೆ ರೈತರ ಹೊಲ ಗದ್ದೆಗಳಿಗೆ ಬರುವುದು ತಪ್ಪುತ್ತಿಲ್ಲ.

ಸರೋಜಮ್ಮ, ಮಾಜಿ ಸದಸ್ಯೆ, ಕೊಡಗು ಜಿಲ್ಲಾ ಪಂಚಾಯತ್

ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯ ಆಗಿಂದಾಗ್ಗೆ ನಡೆಯುತ್ತಿದೆ. ಆದರೆ ಕಾಡಾನೆಗಳು ರೈತರ ಬೆಳೆಗಳ ಮೇಲೆ ದಾಳಿ ಮಾಡುತ್ತಿರುವುದು ಮಾತ್ರ ತಪ್ಪುತ್ತಿಲ್ಲ. ಕಾಡಾನೆ ರೈತರ ಬೆಳೆಗಳ ಹಾಗೂ ರೈತರ ಮೇಲೆ ದಾಳಿ ಮಾಡುವುದನ್ನು ತಪ್ಪಿಸಬೇಕಿದೆ. ಕಾಡಂಚಿನಲ್ಲಿ ಕಂದಕಗಳನ್ನು ಅಲ್ಲಲ್ಲಿ ತೆಗೆದಿದ್ದಾರೆ. ಇದರಲ್ಲಿ ಮಳೆಗಾಲದಲ್ಲಿ ನೀರು ತುಂಬಿರುತ್ತದೆ. ಇದರಿಂದ ಕೆಲ ಕಾಡಂಚಿನ ಗ್ರಾಮಗಳ ಮನೆಯವರು ತೊಂದರೆ ಅನುಭವಿಸುತ್ತಿದ್ದಾರೆ.

ಪ್ರಕಾಶ್ ಹೆಚ್.ಪಿ., ಕೃಷಿಕ, ಬಿದರೂರು ಗ್ರಾಮ

ಕಾಡಾನೆ ಹಾವಳಿ ನಿಯಂತ್ರಣಕ್ಕಾಗಿ ಶಾಶ್ವತ ಪರಿಹಾರಕ್ಕೆ ಅರಣ್ಯ ಇಲಾಖೆ ವೈಜ್ಞಾನಿಕ ಯೋಜನೆಗಳನ್ನು ರೂಪಿಸುತ್ತಿಲ್ಲ ಎಂಬುದಕ್ಕೆ ಸೂಕ್ತ ಕಾರಣಗಳು ಸಿಗುತಿಲ್ಲ. ಕಾಡಾನೆ ಕಂದಕ, ಸೋಲಾರ್ ತಂತಿ ಬೇಲಿಗೂ ಕಾಡಾನೆಗಳು ಜಗ್ಗುತ್ತಿಲ್ಲ. ರೈತರ ಬೆಳೆ ನಷ್ಟ ಲಕ್ಷ ದಾಟುತ್ತಿದೆ. ಕೋಟಿಗಟ್ಟಲೆ ಹಣವನ್ನು ಯೋಜನೆ ಹೆಸರಿನಲ್ಲಿ ಮಣ್ಣುಪಾಲು ಮಾಡುವ ಬದಲು ರೈತರಿಗೆ ಪರಿಹಾರ ರೂಪದಲ್ಲಿ ಸರ್ಕಾರ ನೀಡಲಿ.

ಬಿ. ಎನ್. ವಸಂತ್ ಕುಮಾರ್, ಕೃಷಿಕ, ಹಿರಿಕರ ಗ್ರಾಮ

ಇತ್ತೀಚಿನ ದಿನಗಳಲ್ಲಿ ಕೊಡಗಿನಲ್ಲಿ ಕಾಡಾನೆ-ಮಾನವ ಸಂಘರ್ಷ ತೀವ್ರವಾಗುತ್ತಿದೆ. ಜಿಲ್ಲೆಯ ಅರಣ್ಯಗಳಲ್ಲಿ ಆನೆಗಳಿಗೆ ಕುಡಿಯುವ ನೀರು, ಆಹಾರದ ಪ್ರಮಾಣ ಕಡಿಮೆ ಆಗಿದ್ದು, ಆನೆಗಳ ಸಂಖ್ಯೆ ಹೆಚ್ಚಾಗಿರುವುದೇ ಇದಕ್ಕೆ ಕಾರಣ. ಅರಣ್ಯ ಇಲಾಖೆ ಅಧಿಕಾರಿಗಳು ಜನಸಾಮಾನ್ಯರ ಕಣ್ಣಿಗೆ ಮಣ್ಣೆರಚುವ ಸಲುವಾಗಿ ಆಗಾಗ್ಗೆ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸುತ್ತಿರುತ್ತಾರೆ. ಆದರೆ ಈ ಆನೆಗಳು ಮತ್ತೊಂದು ಭಾಗದ ಮಾನವ ವಸತಿ ಪ್ರದೇಶದ ಕಡೆಗೆ ದಾಳಿ ಇಡುತ್ತವೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ.

ಸುರೇಶ್ ಕಾಯರ್‌ಮಾರ್, ಅಧ್ಯಕ್ಷ, ರೈತ ಹಿತ ನಿರ್ಣಯ ಸಮಿತಿ, ಮದೆ ಗ್ರಾಮ

ಆನೆ-ಮಾನವ ಸಂಘರ್ಷ ಕೊಡಗಿನಲ್ಲಿ ಮಿತಿಮೀರಿದೆ. ಕೇವಲ ಆನೆ ಮಾನವ ಸಂಘರ್ಷವಷ್ಟೇ ಅಲ್ಲ. ವನ್ಯಜೀವಿಗಳು ಮತ್ತು ಮಾನವನ ಸಂಘರ್ಷವೂ ಕೈಮೀರಿದ ಹಂತ ತಲುಪಿದೆ. ಕೊಡಗಿನ ರೈತರ ಆಸ್ತಿ ಪಾಸ್ತಿ ನಷ್ಟ, ಜೀವ ಹಾನಿ ನಿರಂತರವಾಗಿ ನಡೆಯುತ್ತಲೇ ಇದೆ. ಅರಣ್ಯ ಇಲಾಖೆಯಷ್ಟೇ ಅಲ್ಲ ರಾಜ್ಯ ಸರ್ಕಾg Àಇದನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ. ಆನೆಗಳು ಯಾವಾಗ ದಾಳಿ ನಡೆಸುತ್ತವೆ ಎಂಬ ಭಯದಲ್ಲಿ ತಮ್ಮ ತೋಟದಲ್ಲಿ ಸಂಚರಿಸುವ ಪರಿಸ್ಥಿತಿ ತೋಟದ ಮಾಲೀಕರಿಗೂ ಎದುರಾಗಿದೆ.

ಕಾಡ್ಯಮಾಡ ಮನು ಸೋಮಯ್ಯ, ಅಧ್ಯಕ್ಷ, ರೈತ ಸಂಘ, ಕೊಡಗು.

ಕಾಡಾನೆಗಳು ನಾಡಿಗೆ ದಾಳಿ ಇಡುವುದು ಈಗ ಸಾಮಾನ್ಯ ಎಂಬAತಾಗಿದೆ. ಅರಣ್ಯ ಇಲಾಖೆಯ ಯಾವುದೇ ಕ್ರಮಗಳು ಫಲಕಾರಿ ಆಗಿ ಉಳಿದಿಲ್ಲ. ಆನೆಗಳ ಸಂಖ್ಯೆ ಹೆಚ್ಚುತ್ತಿರುವುದೇ ಇದಕ್ಕೆ ಕಾರಣ. ದೂರದೃಷ್ಟಿ ಹೊಂದಿರುವ ಪರಿಣಾಮಕಾರಿ ಹೆಜ್ಜೆಗಳನ್ನು ಅರಣ್ಯ ಇಲಾಖೆ ತೆಗೆದುಕೊಳ್ಳದಿದ್ದರೆ ಭವಿಷ್ಯದಲ್ಲಿ ಮತ್ತಷ್ಟು ಸಮಸ್ಯೆಗಳು ಸೃಷ್ಟಿ ಆಗಬಹುದು. ಈ ಸಂಬAಧ ಆನೆ ಮಾನವ ಸಂಘರ್ಷ ತಡೆಗೆ ಬಜೆಟ್‌ನಲ್ಲೂ ಹೆಚ್ಚಿನ ಅನುದಾನ ಮೀಸಲಿಡುವ ಅಗತ್ಯವಿದೆ.

ರಮ್ಯಾ ಬಿ.ಎಸ್. ಕುಶಾಲನಗರ

ಈಗ ಕಾಫಿ ಕೆಲಸದ ಸಮಯ. ಆದರೆ ತೋಟದ ತುಂಬಾ ಕಾಡಾನೆಗಳು ಬೀಡು ಬಿಟ್ಟಿವೆ. ಇದರಿಂದ ತೋಟಕ್ಕೆ ಕೂಲಿ ಕಾರ್ಮಿಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ಕಾಫಿಗೆ ಬೆಲೆ ಇದ್ದರೂ ಸೂಕ್ತ ಸಮಯಕ್ಕೆ ಕೊಯ್ಲು ಮಾಡಲು ಸಾಧ್ಯವಾಗುತ್ತಿಲ್ಲ. ಕಾಡಾನೆಗಳನ್ನು ಕೂಡಲೇ ಕಾಫಿ ತೋಟದಿಂದ ಕಾಡಿಗೆ ಓಡಿಸಿದರೆ ಒಳ್ಳೆಯದು.

ಮಾಂಗೇರ ಕ್ವೀನ್, ಸಮಾಜ ಸೇವಕರು, ಗೋಣಿಕೊಪ್ಪ

ಆನೆ-ಮಾನವ ಸಂಘರ್ಷ ತಪ್ಪಿಸಲು ಹೊಸ ಯೋಜನೆ ಹಾಗೂ ಆಲೋಚನೆಗೆ ಚಿಂತನೆ ನಡೆದಿದೆ. ಈ ಸಂಬAಧ ಅರಣ್ಯ ಇಲಾಖೆ ಸಚಿವರೊಂದಿಗೂ ಸುದೀರ್ಘವಾಗಿ ಚರ್ಚಿಸಲಾಗಿದೆ. ಜಿಲ್ಲೆಯ ನಾವಿಬ್ಬರು ಶಾಸಕರು ಕೂಡ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದೇವೆ. ಆನೆಗಳು ನಾಡಿಗೆ ಬರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಇದು ಕೇವಲ ಕೊಡಗಿಗೆ ಸೀಮಿತವಲ್ಲ. ಮಲೆನಾಡು ಪ್ರದೇಶ ಮತ್ತು ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶದಲ್ಲೂ ಕೂಡ ಆನೆ ಮಾನವ ಸಂಘರ್ಷವನ್ನು ತಪ್ಪಿಸಲು ಪ್ರಯತ್ನಿಸಲಾಗುತ್ತಿದೆ.

ಎ.ಎಸ್. ಪೊನ್ನಣ್ಣ, ವಿರಾಜಪೇಟೆ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net