ರೈತರಿಗೆ ಅನುಕೂಲ ಕಲ್ಪಿಸಲು ಪಶು ಚಿಕಿತ್ಸಾಲಯ ಆರಂಭ

08M.D.R.7
ಮದ್ದೂರು ತಾಲೂಕಿನ ಮಲ್ಲನಕುಪ್ಪೆ ಗ್ರಾಮದಲ್ಲಿ ಹಸುವಿಗೆ ಪೂಜೆ ಸಲ್ಲಿಸುವ ಮೂಲಕ ಶಾಸಕ ಕೆ.ಎಂ.ಉದಯ್ ನೂತನ ಪಶು ಚಿಕಿತ್ಸಾಲಯವನ್ನು ಉದ್ಘಾಟಿಸಿದರು. ಕದಲೂರು ರಾಮಕೃಷ್ಣ, ಸವಿತ, ಸಿ.ಪಿ.ರವಿ, ಡಾ.ಎಸ್.ಸಿ.ಸುರೇಶ್, ಬಿ.ಬಿ.ಡಾ.ಪ್ರವೀಣ್‌ಕುಮಾರ್ ಇದ್ದರು.
Published on

ಮದ್ದೂರು: ತಾಲೂಕಿನ ಮಲ್ಲನಕುಪ್ಪೆ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಪಶು ಚಿಕಿತ್ಸಾಲಯ ಆರಂಭಿಸಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ತಾಲೂಕಿನ ಮಲ್ಲನಕುಪ್ಪೆ ಗ್ರಾಮದಲ್ಲಿ ಶುಕ್ರವಾರ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಆರಂಭಿಸಿರುವ ನೂತನ ಪಶು ಚಿಕಿತ್ಸಾಲಯ ಉದ್ಘಾಟಿಸಿ ಮಾತನಾಡಿದರು.

ಮಲ್ಲನಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮಗಳ ಪರಿಮಿತಿ ಸಾಕಷ್ಟು ದೂರದಲ್ಲಿವೆ. ರಾಸುಗಳು ಅನಾರೋಗ್ಯಕ್ಕೆ ತುತ್ತಾದಾಗ ನೆರೆ ಜಿಲ್ಲೆಯ ಹುಲಿಯೂರುದುರ್ಗ ಅಥವಾ ಮದ್ದೂರು ಪಟ್ಟಣಕ್ಕೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಪಶು ಚಿಕಿತ್ಸಾಲಯ ತೆರೆಯುವಂತೆ ರೈತರು ಮನವಿ ಮಾಡಿದ ಕಾರಣ ಪಶು ಚಿಕಿತ್ಸಾ ಆರಂಭಿಸಲಾಗಿದೆ ಎಂದರು.

ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ (ಆಡಳಿತ) ಡಾ.ಎಸ್.ಸಿ.ಸುರೇಶ್ ಮಾತನಾಡಿ, ಸರ್ಕಾರ ರೈತರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಇದನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 410 ರಾಸುಗಳು ಆಕಸ್ಮಿಕವಾಗಿ ಮೃತಪಟ್ಟಿದ್ದು, ಇವುಗಳಿಗೆ ತಲಾ 10,000 ರೂ.ನಂತೆ 4.10 ಲಕ್ಷ ರೂ. ಹಾಗೂ ಆಕಸ್ಮಿಕವಾಗಿ ಮೃತಪಟ್ಟ ಕುರಿಗಳಿಗೆ ಒಂದ ಕುರಿಗೆ 5 ಸಾವಿರದಂತೆ 18 ಲಕ್ಷ ರೂ.ಪರಿಹಾರ ನೀಡಲಾಗಿದೆ ಎಂದರು.

ಕುರಿ ಸಾಕಣೆಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ. ಅಲ್ಲದೆ ರೋಗಕ್ಕೆ ಒಳಪಟ್ಟ ಜಾನುವಾರುಗಳಿಗೆ ಮನೆ ಬಾಗಿಲಿಗೆ ಹೋಗಿ ಇಲಾಖೆ ವತಿಯಿಂದ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ರೈತರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಪಶುಪಾಲನಾ ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) ಬಿ.ಬಿ.ಡಾ.ಪ್ರವೀಣ್‌ಕುಮಾರ್ ಮಾತನಾಡಿ, ಶಾಸಕ ಕೆ.ಎಂ.ಉದಯ್ ಅವರು ಸರ್ಕಾರದ ಮಟ್ಟದಲ್ಲಿ ಹೋರಾಟ ಮಾದ ಫಲವಾಗಿ ಮಲ್ಲನಕುಪ್ಪೆಗೆ ಪಶು ಚಿಕಿತ್ಸಾ ಕೇಂದ್ರ ಆರಂಭವಾಗಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಸವಿತಾ, ಉಪಾಧ್ಯಕ್ಷ ಸಿ.ಪಿ.ರವಿ, ಮನ್‌ಮುಲ್ ನಿರ್ದೇಶಕ ಕದಲೂರು ರಾಮಕೃಷ್ಣ, ಪಶುಪಾಲನಾ ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) ಬಿ.ಬಿ.ಡಾ.ಪ್ರವೀಣ್‌ಕುಮಾರ್, ಮುಖಂಡರಾದ ರವಿಕುಮಾರ್, ತಿಮ್ಮಯ್ಯ, ವಾಸು, ಮಂಜು, ಶಿವನಂಜು, ಮಹೇಶ್ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net