

ತುಮಕೂರು: ಬೀದಿನಾಯಿಗಳ ಹಾವಳಿ ನಿಯಂತ್ರಿಸಲು ಮಹಾನಗರ ಪಾಲಿಕೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಅಸ್ತ್ರ ಬಳಸುತ್ತಿದೆ. 1 ಬೀದಿನಾಯಿ ಶಸ್ತ್ರಚಿಕಿತ್ಸೆಗೆ 1200 ರೂ.ಗಳನ್ನು ಪಾಲಿಕೆ ವ್ಯಯಿಸುತ್ತಿದೆ.
ಸ್ಮಾರ್ಟ್‌ಸಿಟಿಯಲ್ಲಿ ಬೀದಿನಾಯಿ, ಹಂದಿ ಹಾಗೂ ಬಿಡಾಡಿ ದನಗಳ ಹಾವಳಿ ಹೆಚ್ಚಿದ್ದು ಬೀದಿನಾಯಿಗಳ ಉಪಟಳದಿಂದ ತುಮಕೂರಿಗರು ರೋಸಿಹೋಗಿದ್ದಾರೆ. 35 ವಾರ್ಡ್‌ಗಳಲ್ಲೂ ನಾಯಿಗಳ ಹಾವಳಿಯಿಂದ ಕಂಗೆಟ್ಟಿದ್ದ ಜನತೆ ಈಗ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.
1 ನಾಯಿಗೆ 1200 ರೂ.: ಪ್ರತಿವಾರ್ಡ್‌ನಲ್ಲಿ 300 ರಿಂದ 500 ಬೀದಿನಾಯಿಗಳಿದ್ದು, ನಗರದಲ್ಲಿ 10 ಸಾವಿರಕ್ಕೂ ಹೆಚ್ಚಿವೆ ಎಂದು ಅಂದಾಜಿ ಸಲಾಗಿದೆ. ದಿನೇದಿನೆ ಹೆಚ್ಚುತ್ತಿರುವ ನಾಯಿಗಳ ನಿಯಂತ್ರಣಕ್ಕೆ ಅಂದಾಜು 1 ಕೋಟಿ ರೂ. ವೆಚ್ಚವಾಗಲಿದೆ.ಬೆಂಗಳೂರಿನ ಚೇತಕ್ ಅನಿಮಲ್ ವೆಲ್‌ಫೇರ್ ಟ್ರಸ್ಟ್ ಸಂಸ್ಥೆಯು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಗುತ್ತಿಗೆ ಪಡೆದುಕೊಂಡಿದೆ. ಈ ಸಂಸ್ಥೆ ಸಿಬ್ಬಂದಿ ಬೀದಿನಾಯಿಗಳನ್ನು ಹಿಡಿದು, ಶಸ್ತ್ರಚಿಕಿತ್ಸೆ ನಡೆಸಿ, ಆರೈಕೆ ಮಾಡಿ ಪುನಃ ಅವುಗಳು ಮೊದಲಿದ್ದ ಸ್ಥಳಕ್ಕೆ ಬಿಡುವ ಪ್ರಕ್ರಿಯೆ ಕೈಗೊಳ್ಳಲಿದ್ದು, ಶುಕ್ರವಾರ ಈ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ.
1 ವಾಹನ, 12 ಸಿಬ್ಬಂದಿ: ಬೀದಿನಾಯಿಗಳ ಕಾರ್ಯಾಚರಣೆಗೆ ಚೇತಕ್ ಅನಿಮಲ್ ವೆಲ್‌ಫೇರ್ ಟ್ರಸ್ಟ್ ಸಂಸ್ಥೆ ಒಂದು ವಾಹನ ಮೀಸಲಿರಿಸಿದೆ. ಚಾಲಕ ಸೇರಿ ನಾಲ್ವರು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಲಿದ್ದಾರೆ. ನಾಯಿಗಳಿಗೆ ತೊಂದರೆ ಆಗದಂತೆ ಸುರಕ್ಷಿತವಾಗಿ ಹಿಡಿದು ನಗರದ ಹೊರವಲಯದಲ್ಲಿ ವೈಜ್ಞಾನಿಕ ರೀತಿ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಇಬ್ಬರು ಪಶುವೈದ್ಯರು ಕೈಗೊಳ್ಳುತ್ತಾರೆ. 7 ದಿನಗಳ ಶುಶ್ರೂಷೆ ಬಳಿಕ ಮತ್ತೆ ಹಿಂದೆ ಇದ್ದ ಸ್ಥಳಕ್ಕೆ ಬಿಡಲಾಗುವುದು.
ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್ ಬಳಿ ಚಿಕಿತ್ಸೆ: ಪ್ರಾಣಿ ಜನನ ನಿಯಂತ್ರಣ (ನಾಯಿಗಳು)2011ರ ನಿಯಮಗಳ ಪ್ರಕಾರ ಸಂಸ್ಥೆಯು ಶಸ್ತ್ರಚಿಕಿತ್ಸೆ ಗುತ್ತಿಗೆ ಪಡೆದುಕೊಂಡಿದೆ. ನಗರದ ಹೊರವಲಯದ ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್ ಬಳಿ ತಾತ್ಕಾಲಿಕವಾಗಿ ನಿರ್ಮಿಸಿರುವ ಶಸ್ತ್ರಚಿಕಿತ್ಸಾ ಘಟಕದಲ್ಲಿ ಹೆಣ್ಣು, ಗಂಡು ನಾಯಿಗಳೆರಡಕ್ಕೂ ಪಶು ವೈದ್ಯರೇ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಿದ್ದಾರೆ. 2 ದಿನ ಉಪವಾಸಗಳ ಬಳಿಕ ಶಸ್ತ್ರಚಿಕಿತ್ಸೆ ಮಾಡಿ 3 ರಿಂದ 7 ದಿನ ಆ ನಾಯಿಗಳ ಆರೈಕೆ ಮಾಡಿ, ಶುಶ್ರೂಷೆ ಬಳಿಕ ಬಿಡಲಾಗುತ್ತದೆ.
ಪ್ರಾಣಿದಯಾ ಸಂಘ ಚಕಾರವೆತ್ತಂಗಿಲ್ಲ: 1 ಗಂಡು, 1 ಹೆಣ್ಣು ನಾಯಿ 6 ವರ್ಷ ಜೀವಂತವಾಗಿದ್ದರೆ 1 ಲಕ್ಷ ನಾಯಿಗಳ ಹುಟ್ಟಿಗೆ ಕಾರಣವಾಗಲಿವೆ. 6 ತಿಂಗಳ ಹೆಣ್ಣು, ಗಂಡು ನಾಯಿಗಳನ್ನು ಮಾತ್ರ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗುವುದು. ಪ್ರಾಣಿದಯಾ ಸಂಘದವರೂ ಚಕಾರವೆತ್ತದಂತೆ ವೈಜ್ಞಾನಿಕ ರೀತಿಯಲ್ಲಿ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗುತ್ತಿದೆ.
ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೊಳಪಡುವ ಬೀದಿನಾಯಿಗಳಿಗೆ ಹುಚ್ಚು ನಾಯಿ ರೋಗನಿರೋಧಕ ಲಸಿಕೆಯನ್ನೂ ಸಹ ಹಾಕಲಾಗುವುದು. 1ವರ್ಷಕ್ಕೆ ಟ್ರಸ್ಟ್‌ಗೆ ಗುತ್ತಿಗೆ ನೀಡಲಾಗಿದೆ. 1 ನಾಯಿ ಶಸ್ತ್ರಚಿಕಿತ್ಸೆ, ರೋಗನಿರೋಧಕ ಇಂಜೆಕ್ಷನ್, ಆರೈಕೆ, ಶುಶ್ರೂಷೆಗೆ 1200 ರೂ., ವೆಚ್ಚವಾಗಲಿದ್ದು ಪಾಲಿಕೆ ಭರಿಸಲಿದೆ. ಡಾ.ಟಿ.ನಾಗೇಶ್ ಕುಮಾರ್ ಪಾಲಿಕೆ ಆರೋಗ್ಯಾಧಿಕಾರಿ