ಆರಂಭವಾಗದ ಪಶು ಆಂಬುಲೆನ್ಸ್‌ ಸೇವೆ-ಜಾನುವಾರುಗಳಿಗೆ ಚಿಕಿತ್ಸೆ ಅಲಭ್ಯ

Animal Ambulance yet not started
Published on

ಕಾರವಾರ: ಹಿಂದಿನ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷಿ ಪಶು ಸಂಜೀವಿನಿ ಎಂಬ ಸಂಚಾರಿ ಪಶು ಆಂಬುಲೆನ್ಸ್ ವ್ಯವಸ್ಥೆ ಜಾರಿಯಾಗದೇ ನೆನೆಗುದಿಗೆ ಬಿದ್ದಿದೆ.

ಆಂಬುಲೆನ್ಸ್‌ಗಳು ಖಾಸಗಿ ಕಂಪನಿ ತೆಕ್ಕೆಯಲ್ಲಿದ್ದು, ಜಿಲ್ಲೆಯ ಅನಾರೋಗ್ಯಪೀಡಿತ ಪಶುಗಳಿಗೆ ಚಿಕಿತ್ಸೆಯೇ ದುರ್ಲಭವಾಗಿದೆ.

2019-20 ರಲ್ಲಿ ಬಿಜೆಪಿ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ಪಶು ಸಂಜೀವಿನಿ ಎಂಬ ಸಂಚಾರಿ ಆಂಬುಲೆನ್ಸ್ ಪ್ರಾರಂಭಿಸುವುದಾಗಿ ಘೋಷಿಸಲಾಗಿತ್ತು. ಹಂತ ಹಂತವಾಗಿ ಎಲ್ಲ ಜಿಲ್ಲೆಗಳಲ್ಲಿ ಪ್ರಾರಂಭಿಸಲಾಯಿತು.

2022 ರಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಒಟ್ಟು 13 ಪಶು ಸಂಜೀವಿನಿ ವಾಹನಗಳನ್ನು ಸರ್ಕಾರ ಒದಗಿಸಿತ್ತು. ಆಗಸ್ಟ್ 15 ರಂದು ಆಗಿನ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟನೆ ಮಾಡಿದ್ದರು.

"ಇನ್ನು ಪಶುಗಳಿಗೆ ಮನೆ ಬಾಗಿಲಿಗೇ ಬಂದು ಚಿಕಿತ್ಸೆ ನೀಡಲು ವ್ಯವಸ್ಥೆಯಾಗುವುದು" ಎಂದು ಬಿಜೆಪಿ ಪ್ರಚಾರ ಮಾಡಿತ್ತು. ಆದರೆ, ಅದರ ನಿರ್ವಹಣೆಗೆ ವೈದ್ಯರು, ಸಿಬ್ಬಂದಿ ನೇಮಿಸದ ಕಾರಣ ವರ್ಷವಾಗುತ್ತ ಬಂದರೂ ಆಂಬುಲೆನ್ಸ್ಗಳು ಓಡಾಟ ಪ್ರಾರಂಭಿಸಿಲ್ಲ.
ಗುತ್ತಿಗೆ ಗೊಂದಲ:
ಆಂಬುಲೆನ್ಸ್‌ ಗಳ ನಿರ್ವಹಣೆಗೆ ಒಬ್ಬ ಪಶು ವೈದ್ಯ, ಒಬ್ಬ ಪಶು ವೈದ್ಯಕೀಯ ಸಹಾಯಕ ಹಾಗೂ ಒಬ್ಬ ಚಾಲಕನನ್ನು ನೀಡಬೇಕು ಎಂಬುದು ಸರ್ಕಾರದ ನಿಯಮವಾಗಿತ್ತು. 1962 ಎಂಬ ಸಹಾಯವಾಣಿಗೆ ಕರೆ ಮಾಡಿದರೆ, ಆಂಬುಲೆನ್ಸ್ ಸೇವೆ ಒದಗಿಸುವ ಚಿಂತನೆ ಮಾಡಲಾಗಿತ್ತು.

ಪ್ರತಿ ಆಂಬುಲೆನ್ಸ್ ನಿರ್ವಹಣೆಗೆ ಸರ್ಕಾರ ಪ್ರತಿ ತಿಂಗಳು 1.50 ಲಕ್ಷ ರೂ. ನೀಡುವುದಾಗಿ ತಿಳಿಸಿತ್ತು. ಈ ಹಣದಲ್ಲಿ ಶೇ.40 ರಷ್ಟು ಕೇಂದ್ರ ಸರ್ಕಾರ ಶೇ. 60 ರಷ್ಟು ಹಣವನ್ನು ರಾಜ್ಯ ಸರ್ಕಾರ ಭರಿಸುವ ಯೋಜನೆ ಇದಾಗಿತ್ತು.

ಇದನ್ನೂ ಓದಿ:ಸತ್ಯ ಶೋಧಿಸಿ ವರದಿ ಮಾಡುವ ಗುಣ ಬೆಳೆಸಿಕೊಳ್ಳಿ
ಆಂಬುಲೆನ್ಸ್‌ಗಳ ಸಿಬ್ಬಂದಿ ಹಾಗೂ ಓಡಾಟದ ನಿರ್ವಹಣೆಯ ಜವಾಬ್ದಾರಿಯನ್ನು ರಾಜ್ಯಮಟ್ಟದಲ್ಲಿಯೇ ಹಂಚಿಕೆ ಮಾಡಲು ನಿರ್ಣಯಿಸಿ 2022 ರ ಜೂನ್‌ನಲ್ಲಿ ಟೆಂಡರ್‌ ಕರೆಯಲಾಗಿತ್ತು. ಆದರೆ, ಒಬ್ಬರೇ ಬಿಡ್ ಮಾಡಿದ ಕಾರಣ ಮರು ಟೆಂಡರ್ ಕರೆದು, ಎಜುಸ್ಪಾರ್ಕ್ ಎಂಬ ಕಂಪನಿಗೆ ಗುತ್ತಿಗೆ ನೀಡಲಾಗಿದೆ.

ಕಂಪನಿ ಗುತ್ತಿಗೆ ಪಡೆದು, ಹಲವು ತಿಂಗಳುಗಳೇ ಆದರೂ ಇದುವರೆಗೂ ಆಂಬುಲೆನ್ಸ್ ಓಡಾಟ ಪ್ರಾರಂಭವಾಗಿಲ್ಲ. ಕಂಪನಿಯೊಳಗಿನ ಕೆಲವು ಗೊಂದಲಗಳಿಗೆ ಸಮಸ್ಯೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶುಗಳಿಗೆ ಸಮಸ್ಯೆ:
ಉತ್ತರ ಕನ್ನಡ ಜಿಲ್ಲೆಯಲ್ಲಿ 129 ಪಶು ವೈದ್ಯರ ಹುದ್ದೆಗಳಿವೆ. ಆದರೆ, 17 ಜನ ಮಾತ್ರ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಅಂಕೋಲಾ, ಭಟ್ಕಳ ತಾಲೂಕುಗಳಲ್ಲಿ ಒಬ್ಬರೂ ಪಶು ವೈದ್ಯರಿಲ್ಲ.

ಹೆಚ್ಚಿನ ತಾಲೂಕುಗಳಿಗೆ ತಲಾ ಒಬ್ಬರಿದ್ದರೆ, ಶಿರಸಿ, ಯಲ್ಲಾಪುರಗಳಲ್ಲಿ ಮಾತ್ರ ತಲಾ ಮೂವರು ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ತಾಲೂಕುಗಳಲ್ಲಿ ಸರಾಸರಿ 1 ಲಕ್ಷ ಜಾನುವಾರುಗಳಿದ್ದು, ಒಬ್ಬ ವೈದ್ಯ ಅವುಗಳಿಗೆ ಚಿಕಿತ್ಸೆ, ಕೃತಕ ಗರ್ಭಧಾರಣೆ ಮಾಡುವುದು ದೊಡ್ಡ ಸವಾಲೇ ಸರಿ.

ಪಶು ಆಂಬುಲೆನ್ಸ್ಗಳು ಬಂದರೆ, ಜಿಲ್ಲೆಯ ಈ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇತ್ತು. ಆದರೆ, ಈಗ ಅದೂ ಈಡೇರಿಲ್ಲ. ಪಶುಗಳ ಗೋಳು ಕೇಳುವವರಿಲ್ಲ.

ಪಶು ಸಂಜೀವಿನಿ ಆಂಬುಲೆನ್ಸ್ ನಡೆಸಲು ರಾಜ್ಯಮಟ್ಟದಲ್ಲಿ ಗುತ್ತಿಗೆ ಪಡೆದ ಎಜುಸ್ಪಾರ್ಕ್ ಕಂಪನಿಗೆ ಸೇವೆ ಪ್ರಾರಂಭಿಸಲು ಈಗಾಗಲೇ ಜಿಲ್ಲೆಗೆ ಪೂರೈಕೆಯಾದ 13 ವಾಹನಗಳನ್ನು ಹಸ್ತಾಂತರಿಸಲಾಗಿದೆ. ಆದರೂ ಕಂಪನಿ ವಿಳಂಬ ಮಾಡುತ್ತಿರುವ ಕಾರಣ ಆಗಸ್ಟ್ 1 ರಂದು ಸೇವೆ ಪ್ರಾರಂಭಿಸಲು ಅಂತಿಮ ಗಡುವು ನೀಡಲಾಗಿದೆ. ಕಂಪನಿಯು ಸೇವೆ ಪ್ರಾರಂಭಿಸದೇ ಇದ್ದಲ್ಲಿ ಗುತ್ತಿಗೆಯನ್ನು ರದ್ದು ಮಾಡುವುದಾಗಿ ಎಚ್ಚರಿಸಲಾಗಿದೆ ಎಂಬ ಮಾಹಿತಿ ಇದೆ.ರಾಕೇಶ ಬಾಂಗ್ಲೆಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net