ವಿದ್ಯಾರ್ಥಿ ಭವನದ ದೋಸೆ ಸವಿದ ಅನಿಲ್‌ ಕುಂಬ್ಳೆ ಕುಟುಂಬ

anilkumble
Published on

ಬೆಂಗಳೂರು:  ಟೀಂ ಇಂಡಿಯಾ ಮಾಜಿ ನಾಯಕ, ಸ್ಪಿನ್‌ ಬೌಲರ್‌ ಅನಿಲ್‌ ಕುಂಬ್ಳೆ ಕುಟುಂಬ ಸಮೇತರಾಗಿ ಗಾಂಧೀ ಬಜಾರ್‌ನಲ್ಲಿರುವ ಪ್ರಸಿದ್ಧ ವಿದ್ಯಾರ್ಥಿ ಭವನ ಹೋಟೆಲಿಗೆ ಭೇಟಿ ನೀಡಿದ್ದಾರೆ. ಈ ಕುರಿತಾದ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಸಖತ್​​ ವೈರಲ್​ ಆಗಿವೆ.

ತಮ್ಮ ಕುಟುಂಬ ಸದಸ್ಯರ ಜೊತೆ ಭೇಟಿ ನೀಡಿದ ಕುಂಬ್ಳೆ ವಿದ್ಯಾರ್ಥಿ ಭವನದ ಫೇಮಸ್‌ ಮಸಾಲೆ ದೋಸೆಯನ್ನು  ಸವಿದಿದ್ದಾರೆ. ಕುಂಬ್ಳೆ ಬಂದ ವಿಚಾರವನ್ನು ವಿದ್ಯಾರ್ಥಿ ಭವನ ಎಕ್ಸ್‌ನಲ್ಲಿ ತಿಳಿಸಿದ್ದು, ಇಂದು ವಿದ್ಯಾರ್ಥಿ ಭವನದಲ್ಲಿ ಸುಂದರ ಜೋಡಿಯನ್ನು ನೋಡಿ ಸಂತೋಷವಾಯಿತು ಎಂದು ಬರೆದುಕೊಂಡು ಹೋಟೆಲ್​​ನಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ವಿದ್ಯಾರ್ಥಿ ಭವನವನ್ನು 1943ರಲ್ಲಿ ಉಡುಪಿಯ ವೆಂಕಟರಮಣ ಉರಾಲ್ ಎನ್ನುವವರು ಸ್ಥಾಪಿಸಿದರು. ಸಮೀಪದಲ್ಲಿದ್ದ ಶಾಲೆ, ಕಾಲೇಜಿನ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಹೋಟೆಲ್‌ ಆರಂಭಿಸಲಾಯ್ತು. ಆರಂಭದಲ್ಲಿ ಇಲ್ಲಿಗೆ ವಿದ್ಯಾರ್ಥಿಗಳೇ ತಿಂಡಿ ಸವಿಯಲು ಬರುತ್ತಿದ್ದರಿಂದ ಸ್ನೇಹಿತರೊಬ್ಬರ ಸಲಹೆ ಮೇರೆಗೆ ವೆಂಕಟರಮಣ ಉರಾಲ್, ಇದಕ್ಕೆ ವಿದ್ಯಾರ್ಥಿ ಭವನ ಎಂದು ಹೆಸರಿಟ್ಟರು. ಈ ಹೋಟೆಲ್‌ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿತು.

ಬೆಂಗಳೂರಿನ ಗಾಂಧೀ ಬಜಾರ್ ಬಡಾವಣೆಯಲ್ಲಿರುವ ವಿದ್ಯಾರ್ಥಿ ಭವನ 70 ವರ್ಷಕ್ಕಿಂತ ಹಳೆಯದಾದ ಸಸ್ಯಾಹಾರಿ ಹೋಟೆಲ್‌ ಆಗಿದ್ದು, ಈಗಲೂ ಜನಪ್ರಿಯತೆ ಮತ್ತು ಗುಣಮಟ್ಟವನ್ನು ಉಳಿಸಿಕೊಂಡು ಬಂದಿದೆ. ಭಾರತ ಸೇರಿದಂತೆ ವಿದೇಶದ ಹಲವು ಗಣ್ಯರು ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿ ಆಹಾರ ಸೇವಿಸುತ್ತಾರೆ.

ವಿದ್ಯಾರ್ಥಿ ಭವನದಲ್ಲಿ ದೋಸೆ ತಿಂದು ಕೈ ತೊಳೆದರೂ ಅದರ ಸುವಾಸನೆ ಕೈಯಲ್ಲಿ ಇರುತ್ತದೆ ಎನ್ನುವುದು ಇಲ್ಲಿ ದೊಸೆ ರುಚಿ ನೋಡಿದವರ ಮಾತು. ಇಲ್ಲಿ ಯಾವುದೇ ಕೃತಕ ಆಹಾರ ಸಾಮಗ್ರಿಗಳನ್ನು ಬಳಸುವುದಿಲ್ಲ, ಶುದ್ಧ ಬೆಣ್ಣೆಯಿಂದ ಮಾಡಿದ ತುಪ್ಪ ಬಳಕೆ ಮಾಡಲಾಗುತ್ತದೆ. ಮಸಾಲೆ ದೋಸೆ ಮಾತ್ರವಲ್ಲದೆ , ಇಡ್ಲಿ, ಖಾರಾ ಬಾತ್, ಕೇಸರಿ ಬಾತ್, ಪೂರಿ ಸಾಗು, ಕಾಫಿ ಹಾಗೂ ರವೆ ವಡೆ ಕೂಡಾ ಫೇಮಸ್.‌ ಆಗ ಆರಂಭವಾದ ಬಿಲ್ಡಿಂಗ್‌ ಈಗಲೂ ಇದೆ. ಹೋಟೆಲ್‌ ಚಿಕ್ಕದಾದರೂ ಇಲ್ಲಿ ಬರುವವರ ಸಂಖ್ಯೆ ಸಾವಿರಾರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net