

ಸಿರವಾರ: ಗಣದಿನ್ನಿ ಗ್ರಾಮದಲ್ಲಿ ಶ್ರೀ ಈರಣ್ಣ ತಾತ ದೇವಸ್ಥಾನ ಸಮಿತಿ ನೇತೃತ್ವದಲ್ಲಿ ಭಾನುವಾರ ಭಾನುವಾರ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಾನ್ನಿಧ್ಯ ವಹಿಸಿದ್ದ ಕಲ್ಲೂರು ಅಡವೀಶ್ವರ ಮಠದ ಶ್ರೀ ಶಂಭುಲಿಂಗ ಸ್ವಾಮೀಜಿ ಮಾತನಾಡಿ, ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವುದರಿಂದ ಗುರು-ಹಿರಿಯರು, ಮಠಾಧೀಶರ ಆಶೀರ್ವಾದ ಸಿಗಲಿದೆ. ಹುಟ್ಟಿ ಬೆಳೆದ ಹಾಗೂ ಕೊಟ್ಟ ಮನೆಗೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದರು.
ಅತ್ತೆ-ಮಾವನನ್ನು ಗೌರವದಿಂದ ಕಾಣಬೇಕು. ಸೊಸೆಯನ್ನು ಮಗಳೆಂದು ಭಾವಿಸಿ ಅನ್ಯೋನ್ಯದಿಂದ ಬದುಕಬೇಕು. ಸಂಸಾರದಲ್ಲಿ ಬರುವ ಕಷ್ಟ-ಸುಖಗಳನ್ನು ಸಮನಾಗಿ ಸ್ವೀಕರಿಸಬೇಕು. ಕೋಪ ಬದುಕನ್ನು ಹಾಳುಮಾಡಲಿದ್ದು, ಈ ಬಗ್ಗೆ ಎಚ್ಚರವಿರಬೇಕು ಎಂದು ಶ್ರೀಗಳು ಹೇಳಿದರು.
ಗ್ರಾಪಂ ಅಧ್ಯಕ್ಷ ಜಿ.ಸುಗೂರಯ್ಯ ಸ್ವಾಮಿ, ಮಾಜಿ ಸದಸ್ಯ ಚನ್ನಯ್ಯ ಸ್ವಾಮಿ, ಸಿದ್ದಯ್ಯ ಸ್ವಾಮಿ, ಸುಕೇಂದ್ರ ನಾಯಕ, ಬಸವಜ್ಜ ಇತರರಿದ್ದರು.