

ಶಿವಮೊಗ್ಗ: ವಿನೋಬನಗರ ಶಿವಾಲಯ ಪಕ್ಕದ ಸರ್ಕಾರಿ ಜಾಗದಲ್ಲಿ ನೆಟ್ಟಿದ್ದ ಗಿಡಗಳನ್ನು ಬುಡಸಮೇತ ಕಿತ್ತುಹಾಕಿದವರನ್ನು ಪತ್ತೆ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸೋಮವಾರ ಸ್ನೇಹಜೀವಿ ಗೆಳೆಯರ ಬಳಗದ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಶಿವಾಲಯ ಪಕ್ಕದಲ್ಲಿರುವ ಸರ್ಕಾರಿ ಜಾಗದಲ್ಲಿ ಸ್ಮಾರ್ಟ್‌ಸಿಟಿಯಿಂದ ಹಸಿರೀಕರಣ ಯೋಜನೆಯಡಿ 130 ಗಿಡಗಳನ್ನು ನೆಟ್ಟು ಪೋಷಣೆ ಮಾಡಲಾಗುತ್ತಿತ್ತು. ಗುತ್ತಿಗೆದಾರರು ಈ ಗಿಡಗಳನ್ನು ಕಳೆದ 15 ದಿನಗಳ ಹಿಂದೆ ನೆಟ್ಟಿದ್ದರು. ಆದರೆ ಸರ್ಕಾರಿ ಜಾಗವನ್ನು ಕಬಳಿಸುವ ದೃಷ್ಟಿಯಿಂದ ಕಿಡಿಗೇಡಿಗಳು ಗೇಟನ್ನೂ ಕಿತ್ತು ಸಸಿಗಳನ್ನು ನಾಶಪಡಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಜಾಗವನ್ನು ಪರಭಾರೆ ಮಾಡುವ ಹುನ್ನಾರ ಕೂಡ ನಡೆಯುತ್ತಿದೆ. ಇದರಲ್ಲಿ ಪಾಲಿಕೆಯ ಕೆಲ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ. ಒತ್ತುವರಿ ಮಾಡುವವರೇ ಈ ಗಿಡಗಳನ್ನು ಬುಡಸಮೇತ ಕಿತ್ತು ಹಾಕಿದ್ದಾರೆ. ಪರಿಸರಕ್ಕೆ ಸಂಬಂಧಿಸಿದ ಯೋಜನೆಯ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದು ಅವರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಬಳಗದ ಪ್ರಮುಖರಾದ ಜಿ.ಪಿ.ಶ್ರೀಕಾಂತ್, ಶರತ್ ಚಂದ್ರ, ಶಿವಮೂರ್ತಿ, ಕೆ.ಪ್ರಕಾಶ್, ಶಿವಕುಮಾರ್, ಮುನಿಸ್ವಾಮಿ, ಶ್ಯಾಮ್, ಶಿವಶರಣ ಇತರರಿದ್ದರು.