ತವರಿಗೆ ಮರಳಿದ ಪತ್ನಿಯ ಮೇಲಿನ ಸಿಟ್ಟಿಗೆ ಅತ್ತೆ, ಮಾವನ ಮೇಲೆ ಚೂರಿಯಿಂದ ಇರಿದ ಪತಿ: ಮೂವರು ಆರೋಪಿಗಳ ಬಂಧನ

Crime Logo
Published on

ಕುಂದಾಪುರ: ಪತಿ-ಪತ್ನಿ ಮಧ್ಯೆ ಭಿನ್ನಾಭಿಪ್ರಾಯದಿಂದ ತವರಿಗೆ ಮರಳಿದ ಪತ್ನಿಯ ಮೇಲಿನ ಸಿಟ್ಟಿಗೆದ್ದ ಪತಿಯೊಬ್ಬ ತನ್ನ ಸ್ನೇಹಿತರ ಜತೆ ಬಂದು ಅತ್ತೆ-ಮಾವನಿಗೆ ಚೂರಿಯಿಂದ ಇರಿದು ಗಂಭೀರ ಹಲ್ಲೆ ನಡೆಸಿದ ಘಟನೆ ಜಡ್ಕಲ್ ಗ್ರಾಮ ಮುದೂರು ಉದಯನಗರಲ್ಲಿ ಶುಕ್ರವಾರ ನಡೆದಿದೆ. ಹಲ್ಲೆಗೈದ ಮೂವರು ಆರೋಪಿಗಳನ್ನು ಶಂಕರನಾರಾಯಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ಅರ್ಬಸ್ ಖಾನ್ ಹಾಗೂ ಆತನ ಸಂಗಡಿಗರು ಆರೋಪಿಯಾಗಿದ್ದು, ಆತನ ಮಾವ ಶಾಜಿ ಪಿ.ಎಸ್ ಹಾಗೂ ಅತ್ತೆ ಮಿನಿ ಹಲ್ಲೆಗೊಳಗಾದವರು. ಅವರನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಶಾಜಿ ಅವರ ಕಿರಿಯ ಪುತ್ರಿ ಪಾರ್ವತಿ ಕೇರಳ ಮೂಲದ ಅರ್ಬಸ್ ಖಾನ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದು, ದಂಪತಿಗೆ 5 ತಿಂಗಳ ಹೆಣ್ಣು ಮಗುವಿದೆ. ಪತಿ-ಪತ್ನಿ ನಡುವೆ ಭಿನ್ನಾಭಿಪ್ರಾಯದಿಂದ ಸೆಪ್ಟೆಂಬರ್‌ನಲ್ಲಿ ಪಾರ್ವತಿ ಮಗುವಿನೊಂದಿಗೆ ತವರಿಗೆ ಮರಳಿದ್ದರು. ಶುಕ್ರವಾರ ಅರ್ಬಾನ್ ಖಾನ್ ಇಬ್ಬರು ಸ್ನೇಹಿತರ ಜತೆ ಪಾರ್ವತಿ ಅವರ ಮನೆಗೆ ನುಗ್ಗಿ ಪಾರ್ವತಿ ಅವರ ತಂದೆ, ತಾಯಿಗೆ ಚೂರಿಯಿಂದ ಇರಿಯಲು ಮುಂದಾಗಿದ್ದು, ಮಾವ ಶಾಜಿ ತಪ್ಪಿಸಿಕೊಂಡಿದ್ದಾರೆ. ಅತ್ತೆ ಮಿನಿ ಅವರ ಕುತ್ತಿಗೆಗೆ ಚೂರಿಯಿಂದ ಇರಿಯಲು ಯತ್ನಿಸಿದ್ದಾನೆ. ಅವರು ತಪ್ಪಿಸಿಕೊಂಡು ಮನೆಯಿಂದ ಹೊರಗೆ ಬಂದು ಬೊಬ್ಬೆ ಹಾಕಿದ್ದಾರೆ. ಕೂಗಾಟ ಕೇಳಿ ತೋಟದಲ್ಲಿದ್ದ ಮಗಳು ಪಾರ್ವತಿ, ದಾರಿಯಲ್ಲಿ ಹೋಗುವ ರಾಜನ್ ಎಂಬುವರು ಬಂದ ಸಂದರ್ಭ ಅರ್ಬಾನ್ ಖಾನ್ ಪರಾರಿಯಾಗಿದ್ದಾನೆ. ಹೋಗುವಾಗ ಅತ್ತೆ ಮಿನಿ ಅವರಿಗೆ ಕೊಲ್ಲುವ ಬೆದರಿಕೆ ಹಾಕಿದ್ದಾನೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತಾಂತರಕ್ಕೆ ಒತ್ತಡ: ಪಾರ್ವತಿ ಹಾಗೂ ಅರ್ಬಸ್ ಖಾನ್ ಅಬುದಾಬಿಯಲ್ಲಿ ಕೆಲಸದಲ್ಲಿದ್ದು, ಈ ಸಂದರ್ಭ ಅವರ ಮಧ್ಯೆಪರಿಚಯ ಬೆಳೆದಿತ್ತು. ವಿವಾಹಕ್ಕೆ ಮನೆಯವರ ವಿರೋಧವಿದ್ದ ಹಿನ್ನೆಯಲ್ಲಿ ಕೇರಳದಲ್ಲಿ ರಿಜಿಸ್ಟ್ರಾರ್ ವಿವಾಹವಾಗಿದ್ದರು. ಅರ್ಬಸ್ ಖಾನ್ ಸ್ಮಗ್ಲಿಂಗ್ ವ್ಯವಹಾರ ನಡೆಸುತ್ತಿದ್ದು, ಪತ್ನಿ ಪಾರ್ವತಿ ಅವರನ್ನೂ ತನ್ನ ವ್ಯವಹಾರದಲ್ಲಿ ಪಾಲ್ಗೊಳ್ಳುವಂತೆ ಒತ್ತಡ ಹೇರುತ್ತಿದ್ದ. ಅಲ್ಲದೆ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲು ಒತ್ತಾಯ ಮಾಡುತ್ತಿದ್ದು, ಇದರಿಂದ ನೊಂದ ಪಾರ್ವತಿ ಅವರು 5 ತಿಂಗಳ ಹಿಂದೆ ತಾಯಿ ಮನೆಗೆ ಮರಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net