

ವಿಜಯಪುರ: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸೆಗಣಿ ತೋರಿಸುವ ಮೂಲಕ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು ಚಾಮರಾಜಪೇಟೆಯ ಗೋವಿನ ಕೆಚ್ಚಲು ಕೊಯ್ದ ಪ್ರಕರಣವನ್ನು ಖಂಡಿಸಿದರು.
"ಇಟ್ಟರೆ ಸೆಗಣಿಯಾದೆ ತಟ್ಟಿದರೆ ಕುರುಳಾದೆ ಸುಟ್ಟರೆ ನೊಸಲಿಗೆ ವಿಭೂತಿಯಾದೆ ನೀನಾರಿಗಾದೆ ಕಾಂಗ್ರೆಸ್?' ಎಂಬ ಕವನ ಓದುವ ಮೂಲಕ ಗೋವಿನ ಮಹತ್ವ ಸಾರುತ್ತಾ ಇನ್ನೊಂದೆಡೆ ಕಾಂಗ್ರೆಸ್ನ ದುರಾಡಳಿತ ಖಂಡಿಸಿದ ರೈತ ಮೋರ್ಚಾ ಪದಾಧಿಕಾರಿಗಳು ಗೋವಿನ ಪೂಜೆ ಸಲ್ಲಿಸಿ ವಿನೂತನವಾಗಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ನಗರದ ಖಾಸಗಿ ಹೊಟೇಲೊಂದರಲ್ಲಿ ಗೋವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ರಾಜ್ಯದಲ್ಲಿ ಮನುಷ್ಯರಿಗೆ ಮಾತ್ರವಲ್ಲ ಗೋವುಗಳಿಗೂ ಭದ್ರತೆ ಇಲ್ಲ. ಗೋವಿನ ಕೆಚ್ಚಲನ್ನು ಅಮಾನುಷವಾಗಿ ಕತ್ತರಿಸಲಾಗಿದೆ ಎಂದರೆ ಈ ಸರ್ಕಾರದಲ್ಲಿ ಎಂಥ ಮನ@ಸ್ಥಿತಿಗಳು ಹೊರಬರುತ್ತಿವೆ ಎಂಬುದನ್ನು ಅರಿಯಬೇಕು. ಹಿಂದುಗಳಾದ ನಾವು ಗೋವನ್ನು ಮಾತೆ ಎಂದು, ದೇವರೆಂದು ಪೂಜಿಸುತ್ತೇವೆ. ಗೋವಿನಲ್ಲಿ ಮುಕ್ಕೋಟಿ ದೇವರು ನೆಲೆಸಿದ್ದಾರೆಂಬುದು ನಮ್ಮ ನಂಬಿಕೆ.
ಇದೇ ಕಾರಣಕ್ಕೆ ನಮ್ಮ ನಂಬಿಕೆ ಘಾಸಿಗೊಳಿಸುವ ಪ್ರಯತ್ನ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿದೆ ಎಂದು ಆಪಾದಿಸಿದರು.
ರಾಜ್ಯದಲ್ಲಿ ಗುತ್ತಿಗೆದಾರರ ಬಿಲ್ ಬಾಕಿ ಇರುವ ಕಾರಣಕ್ಕೆ ಅನೇಕರು ಸಾವಿಗೆ ಶರಣಾಗುತ್ತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ರಾಜ್ಯದಲ್ಲಿ ಗುತ್ತಿಗೆದಾರರು ಕಾಮಗಾರಿ ಕೈಗೊಳ್ಳಲು ಮುಂದೆ ಬರುವುದೇ ಇಲ್ಲ. ಆಂಧ್ರಪ್ರದೇಶ ಹಾಗೂ ತಮಿಳುನಾಡಿನಿಂದ ಗುತ್ತಿಗೆದಾರರನ್ನು ಕರೆಯಿಸಿ ಕೆಲಸ ವಹಿಸುವ ಅನಿವಾರ್ಯತೆ ಬರಲಿದೆ ಎಂದರು.
ಪ್ರಧಾನ ಕಾರ್ಯದರ್ಶಿ ರಾಜಶೇಖರ ಡೊಳ್ಳಿ, ಬಾಲರಾಜ ದಡ್ಡಿ, ಡಿ.ಜಿ. ಬಿರಾದಾರ (ವಕೀಲ), ರಾಚಪ್ಪ ಬಿರಾದಾರ, ವಿಜಯ ಜೋಷಿ ಮತ್ತಿತರರಿದ್ದರು.