ಅಂಗವಿಕಲರ ಸಾಧನೆ ಎಲ್ಲರಿಗೂ ಮಾದರಿ: ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಶ್ಲಾಘನೆ

03_12_Mdy_03(Angavikala Dina)
Published on

ಮಂಡ್ಯ: ಅಂಗವೈಕಲ್ಯದಿಂದ ಹಿಂದುಳಿಯದೆ ಮನಸ್ಥಿತಿಯನ್ನು ಗಟ್ಟಿ ಮಾಡಿಕೊಂಡು ಛಲವನ್ನು ಬೆಳೆಸಿಕೊಂಡು ವಿಶ್ವದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಿರುವ ಹಲವರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಸಾಂಸ್ಕೃತಿಕ ಹಾಗೂ ಸಂಗೀತ ಕ್ಷೇತ್ರದಲ್ಲಿ ಪಂಚಾಕ್ಷರಿ ಗವಾಯಿ ಹಾಗೂ ಪುಟ್ಟರಾಜು ಗವಾಯಿ ಅವರು ಉನ್ನತ ಸಾಧನೆ ಮಾಡಿರುವುದನ್ನು ನೋಡಬಹುದು ಎಂದರು.

ಅಂಗವಿಕಲರನ್ನು ವಿಕಲಚೇತನರೆಂದು ಕರೆಯಲಾಗುತ್ತಿತ್ತು. ಈಗ ಅವರನ್ನು ವಿಶೇಷ ಚೇತನರು ಎಂದು ಕರೆಯುತ್ತೇವೆ. ಏಕೆಂದರೆ ಅವರು ಯಾರಿಗೂ ಕಡಿಮೆ ಇಲ್ಲ ಸಾಧನೆ ಮಾಡುವ ಮೂಲಕ ವಿಶ್ವ ವಿಖ್ಯಾತರಾಗುತಿದ್ದಾರೆ. ಅವರ ಸಾಧನೆ ಎಲ್ಲರಿಗೂ ಮಾದರಿಯಾಗಿದೆ. ಸರ್ಕಾರ ವಿಶೇಷ ಚೇತನರ ಕಲ್ಯಾಣಕ್ಕೆ ಹಲವಾರು ಯೋಜನೆಗಳನ್ನು ತಂದಿದೆ. ಬಡತನದ ರೇಖೆಗಿಂತ ಕೆಳಗಿರುವ ಎಲ್ಲರಿಗೂ  ಸಾಮಾಜಿಕ ಭದ್ರತೆಗಾಗಿ ಪಿಂಚಣಿ ವ್ಯವಸ್ಥೆ ಮಾಡಲಾಗಿದೆ. ಕಣ್ಣು, ಕಾಲು, ಕೈ ಸೇರಿದಂತೆ  ದೇಹದ ವಿವಿಧ ರೀತಿಯ ತೊಂದರೆ ಇರಬಹುದು. ಅವರಿಗೆ ಜೀವನ ನಡೆಸಲು ಅನುಕೂಲವಾಗುವ ರೀತಿಯ ಸಾಧನಗಳನ್ನು  ಇಲಾಖೆಯಿಂದ ನೀಡಲಾಗುವುದು ಎಂದು ವಿವರಿಸಿದರು. 

ಡಿ ದರ್ಜೆಯಿಂದ ಹಿಡಿದು ಐಎಎಸ್ ಅಧಿಕಾರಿಯವರೆಗೂ ಶೈಕ್ಷಣಿಕವಾಗಿ ಮತ್ತು ಉದ್ಯೋಗಗಳಲ್ಲಿ ವಿಶೇಷ ಚೇತನರಿಗೆ    ಮೀಸಲಾತಿಗಳನ್ನು ಕಲ್ಪಿಸಲಾಗಿದೆ. ಈ ಮೂಲಕ ಎಲ್ಲರಂತೆ ಜೀವನವನ್ನು ನಡೆಸಲು ಸರ್ಕಾರವು ಅವಕಾಶ ಕಲ್ಪಿಸಿದೆ. ಅಂಗವಿಕಲರಿಗೆ ಅಂಗವೈಕಲ್ಯತೆ ಇರಬಹುದು. ಆತ್ಮವಿಶ್ವಾಸ ಬೆಳಸಿಕೊಂಡರೆ ಯಾವ ಕಷ್ಟವನ್ನು ಬೇಕಾದರೂ ಮೆಟ್ಟಿ ನಿಂತು ಸಾಧನೆ ಮಾಡಬಹುದು ಎಂದರು.

ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು ಮಾತನಾಡಿ, ಅಂಗವಿಕಲರಿಗೆ ಎಲ್ಲ ಕ್ಷೇತ್ರಗಳಲ್ಲಿ ಸಹಭಾಗಿತ್ವಕ್ಕೆ ಅವಕಾಶ ಕಲ್ಪಿಸಬೇಕೆಂಬ ಅರ್ಥಪೂರ್ಣ ಗುರಿ ಸಾಧನೆಯ ಕೈಂಕರ್ಯಕ್ಕೆ ನಾಗರಿಕ ಸಮಾಜ ಕೈಜೋಡಿಸಬೇಕಿದೆ. ಸಮಾನತೆ ಹಾಗೂ ಸಹಭಾಗಿತ್ವಕ್ಕೆ ಆದ್ಯತೆ ನೀಡುವ ಸಮಾಜದಲ್ಲಿ ಮಾತ್ರ ಸುಸ್ಥಿರ ಅಭಿವೃದ್ಧಿ ಸಾಧ್ಯ ಎಂಬ ವಾಸ್ತವವನ್ನು ನಾವೆಲ್ಲರೂ ಅರಿಯಬೇಕಿದೆ. ತಮ್ಮದಲ್ಲದ ತಪ್ಪಿಗೆ ಬದುಕಿನುದ್ದಕ್ಕೂ ನೋವು, ಸಂಕಟ, ಅನುಭವಿಸುತ್ತಿರುವ ಅಂಗವಿಕಲರಿಗೆ ಆತ್ಮಸ್ಥೈರ್ಯ ತುಂಬಬೇಕಿದೆ. ಸಾರ್ವಜನಿಕ ಜೀವನದಲ್ಲಿ ಎಲ್ಲರಂತೆ ಇವರ ಜೀವನವನ್ನು ಕಟ್ಟಿಕೊಡಬೇಕಿದೆ. ಇತರರಿಗಿಂತ ಭಿನ್ನರಲ್ಲ. ಸಾಧನೆಯ ಹಾದಿಯಲ್ಲಿ ವೈಕಲ್ಯ ಎಂದಿಗೂ ಅಡ್ಡಿ ಆಗುವುದಿಲ್ಲ ಎಂಬ ಮನೋಬಲವನ್ನು ಅವರಲ್ಲಿ ಹೆಚ್ಚಿಸಬೇಕಿದೆ ಎಂದು ಹೇಳಿದರು.

ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಆರ್.ನಾಗರಾಜ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಆರ್.ರೋಹಿತ್, ಪ್ರೇರಣ ಅಂಧರ ಹಾಗೂ ಅಂಗವಿಕಲರ ಸಂಸ್ಥೆ ಅಧ್ಯಕ್ಷ ರವಿಕುಮಾರ್ ಇತರರಿದ್ದರು. 

ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅಂಗವಿಕಲರನ್ನು ಅಭಿನಂದಿಸಲಾಯಿತು. ಅಂತೆಯೇ ದಿನಾಚರಣೆ ಅಂಗವಾಗಿ ಅಂಗವಿಕಲರಿಗೆ ಅನುಕೂಲವಾಗುವಂತಹ ಸಾಧನ ಸಲಕರಣೆಗಳ ಪ್ರದರ್ಶನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net