ಅಂಗಾರಕ ಸಂಕಷ್ಟಿ ಇಡಗುಂಜಿಗೆ ಹರಿದು ಬಂದ ಭಕ್ತಸಾಗರ

IDAGUNDI GANAPA
Published on

ಹೊನ್ನಾವರ: ಅಂಗಾರಕ ಸಂಕಷ್ಟಿ ಪ್ರಯುಕ್ತ ಪುರಾಣ ಪ್ರಸಿದ್ಧ ಇಡಗುಂಜಿಯ ಶ್ರೀ ವಿನಾಯಕ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಪೂಜೆ ನಡೆಯಿತು. ನಾಡಿನ ವಿವಿಧೆಡೆಯಿಂದ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಭಕ್ತರಿಗಾಗಿ ಬೆಳಗ್ಗೆ 5 ಗಂಟೆಯಿಂದ ವಿಘ್ನನಿವಾರಕನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ವಿವಿಧೆಡೆಯಿಂದ ಆಗಮಿಸಿದ ಭಕ್ತರು ದೇವರ ಸನ್ನಿಧಿಯಲ್ಲಿ ಗಣಹೋಮ, ಕುಂಕುಮಾರ್ಚನೆ, ಹಣ್ಣುಕಾಯಿ, ಬಾಳೆಗೊನೆ ಸೇವೆ, ಅಭಿಷೇಕ, ಮಂಗಳಾರತಿ, ಸತ್ಯ ಗಣಪತಿ ವ್ರತ, ಸತ್ಯ ನಾರಾಯಣ ವ್ರತ, ಪಂಚಾಮೃತಾಭಿಷೇಕ, ದೂರ್ವಾರ್ಚನೆ, ಕುಂಕುಮಾರ್ಚನೆ, ಸೇರಿ ವಿವಿಧ ಸೇವೆ ಸಮರ್ಪಿಸಿದರು. ವಿಶೇಷವಾಗಿ ಇಡಗುಂಜಿ ಶ್ರೀ ವಿನಾಯಕ ದೇವರಿಗೆ ಪ್ರಿಯವಾದ ಪಂಚಕಜ್ಜಾಯ ಸೇವೆಯನ್ನು ಭಕ್ತರು ಸಲ್ಲಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ದಂಪತಿ ಭೇಟಿ ನೀಡಿ ಹಣ್ಣುಕಾಯಿ ಸೇವೆ ಸಲ್ಲಿಸಿದರು. ನಮ್ಮೆಲ್ಲರ ಆರಾಧ್ಯದೈವ ಇಡಗುಂಜಿ ವಿನಾಯಕ ದೇವರ ದರ್ಶನ ಮಾಡಿದ್ದೇನೆ. ನಾಡಿಗೆ ಒಳಿತಾಗಲಿ. ಮಳೆ-ಬೆಳೆ ಎಲ್ಲವೂ ಸಮೃದ್ಧಿಯಾಗಿ ಎಲ್ಲರೂ ಸುಖವಾಗಿ ಬಾಳಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net