

ಕಿಕ್ಕೇರಿ: ಹೋಬಳಿಯ ಗೊಲ್ಲರಕೊಪ್ಪಲು ಗ್ರಾಮದ ಹೊರವಲಯದಲ್ಲಿರುವ ಅಂಗರತಿಮ್ಮಪ್ಪನ ಗುಡಿಯಲ್ಲಿ ಜಾನುವಾರುಗಳ ರಕ್ಷಕ ದೇವರ ಜಾತ್ರೆ ಸಂಭ್ರಮದಿಂದ ನಡೆಯಿತು.
ಜಾನುವಾರು, ಗೋವುಗಳ ರಕ್ಷಿಸಿ ಕಾಯುವ ದೇವರಾದ ಅಂಗರತಿಮ್ಮಪ್ಪನೆಂದೇ ಪ್ರತೀತಿ ಇರುವ ದೇವಾಲಯಕ್ಕೆ ರೈತರು ಸಂಭ್ರಮದಿಂದ ಹೋಬಳಿಯಲ್ಲದೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದರು. ತಿಮ್ಮಪ್ಪ ದೇವರಿಗೆ ಮೊಸರನ್ನದ ತಳಿಗೆ ಇಟ್ಟರು. ಹಲವರು ಹಸುವಿನ ಹಾಲಿನ ಗಿಣ್ಣನ್ನು ತಯಾರಿಸಿ ನೈವೇದ್ಯವಾಗಿ ಅರ್ಪಿಸಿದರು.
ಗ್ರಾಮದ ರೈತಾಪಿ ಜನತೆ ಜಾನುವಾರುಗಳ ಮೈತೊಳೆದು, ಕೊಂಬಿಗೆ ಎಣ್ಣೆ ಸವರಿ ಹಸಿರು ಟೇಪು ಸುತ್ತಿ, ಕೊರಳಿಗೆ ಗೆಜ್ಜೆ ಕಟ್ಟಿ, ಹೊಟ್ಟೆಯ ಸುತ್ತ ಕರಿಕಂಬಳಿ ದಾರವನ್ನು ಸುತ್ತಿದರು. ಬೋರೆತಿಮ್ಮಪ್ಪನ ಗುಡಿಯ ಸುತ್ತ ಪ್ರದಕ್ಷಿಣೆ ಹಾಕಿಸಿದರು. ದೇವರಿಗೆ ಪೂಜಿಸಿ ತಿಲಕ ಪ್ರಸಾದ ರಾಸುಗಳಿಗೆ ಇಟ್ಟು, ತೀರ್ಥ ಪ್ರೋಕ್ಷಣೆ ಮಾಡಿಸಿದರು. ರೋಗರುಜಿನ ಬಾರದಂತೆ ತಿಮ್ಮಪ್ಪ ದೇವರು ಕಾಯಲು ಮೊರೆ ಇಟ್ಟರು.
ಹಸುಗಳು ಕರು ಹಾಕಿದೊಡನೆ ಹಸುವಿನ ಮೊದಲ ಗಿಣ್ಣು ಹಾಲಿನಿಂದ ಸಿಹಿ ಗಿಣ್ಣು ತಯಾರಿಸಿಕೊಂಡು ತಿಮ್ಮಪ್ಪ ದೇವರಿಗೆ ಅರ್ಪಿಸಿದರೆ ರೋಗರುಜಿನದಿಂದ ಮುಕ್ತಿ ಸಿಗಲಿದೆ ಎಂಬ ಪ್ರತೀತಿ ಇದೆ. ಕರೊನಾದಿಂದ ದೂರಮಾಡಿ, ರಾಸುಗಳಿಗೆ ಕಾಡುತ್ತಿರುವ ಚರ್ಮಗಂಟು ರೋಗದಿಂದ ಮುಕ್ತಿ ನೀಡು ಎಂದು ಪ್ರಾರ್ಥಿಸಿದರು.
ಗುಡಿಯ ದ್ವಾರ ಬಾಗಿಲಿನಲ್ಲಿರುವ ಆಂಜನೇಯ ಗುಡಿಗೆ ತೆರಳಿ ಹಣ್ಣು ಕಾಯಿ ಅರ್ಪಿಸಿ ಆರತಿ ಬೆಳಗಿದರು. ದೇವರಿಗೆ ಧಾರಣೆ ಮಾಡಲಾಗಿದ್ದ ಕೇಸರಿಯನ್ನು ತಿಲಕವಾಗಿ ಭಕ್ತರು ಧರಿಸಿಕೊಂಡರು.