

ಗಂಗಾಧರ್ ಬೈರಾಪಟ್ಟಣ ರಾಮನಗರ
ಬೆಲೆ ಏರಿಕೆ ಬಿಸಿ ಅಂಗನವಾಡಿ ಮಕ್ಕಳ ಮೊಟ್ಟೆ ಮೇಲೂ ಪರಿಣಾಮ ಬೀರಿದೆ. ಒಂದು ತಿಂಗಳಿಂದ ಮೊಟ್ಟೆ ಸರಬರಾಜು ನಿಂತಿರುವ ಪರಿಣಾಮ ಮಕ್ಕಳು ಮತ್ತು ಬಾಣಂತಿಯರಿಗೆ ಮೊಟ್ಟೆ ವಿತರಣೆ ಸ್ಥಗಿತಗೊಂಡಿದೆ.
ರಾಮನಗರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 60 ತಾಲೂಕುಗಳ ಅಂಗನವಾಡಿಗಳಿಗೆ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳದಿಂದಲೇ ಮೊಟ್ಟೆ ಸರಬರಾಜು ಆಗುತ್ತಿತ್ತು. ಆದರೆ ಟೆಂಡರ್ನಲ್ಲಿ ನಿಗದಿ ಮಾಡಿದ ಮೊತ್ತಕ್ಕಿಂತಲೂ ಹೆಚ್ಚಿನ ಹೊರೆ ಪೂರೈಕೆದಾರರಿಗೆ ಆಗಿರುವ ಕಾರಣ ತಿಂಗಳಿಂದ ಸರಬರಾಜು ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಪುಟಾಣಿಗಳು ಹಾಗೂ ಗರ್ಭಿಣಿಯರಿಗೆ ನೀಡಲಾಗುತ್ತಿದ್ದ ಮೊಟ್ಟೆ ಇಲ್ಲದಂತೆ ಆಗಿದೆ.
ಮಾರುಕಟ್ಟೆಯಲ್ಲಿ 4.50 ರೂ.ನಂತೆ ಹೋಲ್ಸೇಲ್ ದರದಲ್ಲಿ ದೊರೆಯುತ್ತಿದ್ದ ಮೊಟ್ಟೆ ಏಕಾಏಕಿ 6ರೂ. ಆಸುಪಾಸಿಗೆ ಬಂದಿದೆ. ಸಾಮಾನ್ಯವಾಗಿ ಮಳೆ ಹಾಗೂ ಚಳಿಗಾಲ ಮುಗಿಯುವವರೆಗೂ ಮೊಟ್ಟೆ ದರ ಹೆಚ್ಚಾಗಿಯೇ ಇರುತ್ತದೆ. ಉಳಿದ ಅವಧಿಯಲ್ಲಿ ಬೆಲೆ ಕಡಿಮೆ ಆಗುತ್ತದೆ. ಈಗ ಚಳಿಗಾಲ ಆರಂಭಗೊಂಡಿರುವ ಕಾರಣ ಬೆಲೆ ಏರಿಕೆ ಸ್ವಾಭಾವಿಕವಾಗಿ ಹೆಚ್ಚಿದೆ. ಆದರೆ ಇದನ್ನೇ ಮುಂದು ಮಾಡಿಕೊಂಡು ಟೆಂಡರ್ನಲ್ಲಿ ಪೂರೈಕೆ ಮಾಡುವುದಾಗಿ ಹೇಳಿ ಈಗ ಸ್ಥಗಿತಗೊಳಿಸಲಾಗಿದೆ.
ಟೆಂಡರ್ನಲ್ಲಿ ರಾಮನಗರ ತಾಲೂಕಿಗೆ ಪ್ರತಿ ಮೊಟ್ಟೆಗೆ 5.75 ರೂ.ನಂತೆ ಹಾಗೂ ಉಳಿದ ತಾಲೂಕಿಗೆ 5.89 ರೂ.ನಂತೆ ದರ ನಿಗದಿ ಆಗಿತ್ತು. ಈ ದರದಲ್ಲಿಯೇ ವಿತರಣೆ ಮಾಡುವುದು ಕುಕ್ಕುಟ ಮಹಾಮಂಡಳ ಕೆಲಸವೂ ಆಗಿತ್ತು. ಆದರೆ ಈಗ ನಿಗದಿತ ದರಕ್ಕಿಂತ ಹೆಚ್ಚಿನ ಹಣ ವ್ಯಯಿಸಬೇಕಿರುವ ಕಾರಣ ಮಂಡಳಿಗೆ ನಷ್ಟ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೂರೈಕೆ ಸಾಧ್ಯವಿಲ್ಲ ಎಂದು ಸಿಡಿಪಿಒಗಳಿಗೆ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರು ಪತ್ರ ಬರೆದು ತಿಳಿಸಿದ್ದಾರೆ. ಲಭ್ಯ ಮಾಹಿತಿ ಪ್ರಕಾರ ಮಹಾಮಂಡಳ ಪ್ರತಿ ಮೊಟ್ಟೆಗೆ 1.25 ರೂ. ನಷ್ಟ ಅನುಭವಿಸುತ್ತಿದೆ. ಇದರಿಂದ ನೇರವಾಗಿ ರೈತರಿಗೆ ತೊಂದರೆ ಆಗಲಿದೆ ಎನ್ನುವ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಜಿಲ್ಲೆಯ ಬಹುತೇಕ ಅಂಗನವಾಡಿಗಳಿಗೆ ಸೆಪ್ಟೆಂಬರ್ ಎರಡನೇ ವಾರದಲ್ಲಿ ಮೊಟ್ಟೆ ಪೂರೈಕೆ ಮಾಡಿದ್ದು ಬಿಟ್ಟರೆ ನಂತರ ಒಂದೇ ಒಂದು ಮೊಟ್ಟೆಯೂ ಪೂರೈಕೆ ಆಗಿಲ್ಲ. ಆದರೆ ಪೂರೈಕೆ ಆಗದ ಬಗ್ಗೆ ಯಾವುದೇ ಸೂಚನೆ ನೀಡದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೈಕಟ್ಟಿ ಕುಳಿತಿದೆ. ಕೆಲವು ಅಂಗನವಾಡಿಗಳಿಗೆ ನೀವು ಹಣ ಹಾಕಿ ಖರೀದಿ ಮಾಡಿ ಮೊಟ್ಟೆ ವಿತರಣೆ ಮಾಡಿ ನಂತರ ಹಣ ಮಂಜೂರು ಮಾಡಿಕೊಡುತ್ತೇವೆ ಎನ್ನುವ ಮೌಖಿಕ ಆದೇಶ ನೀಡಿದ್ದರೆ ಕೆಲವು ಅಂಗನವಾಡಿಗಳಿಗೆ ಯಾವುದೇ ಸೂಚನೆಯೂ ಇಲ್ಲ. ಆದರೆ ಈಗ ಮಾರುಕಟ್ಟೆಯಲ್ಲಿ ಮೊಟ್ಟೆ ದರ ಹೆಚ್ಚಿರುವ ಕಾರಣ ಪ್ರತಿದಿನ ಗರ್ಭಿಣಿಯರಿಗೆ ಹಾಗೂ ವಾರದಲ್ಲಿ ಎರಡು ಬಾರಿ ಮಕ್ಕಳಿಗೆ ಮೊಟ್ಟೆ ವಿತರಿಸುವುದು ಕಾರ್ಯಕರ್ತೆಯರಿಗೂ ಕಷ್ಟವಾಗಿದೆ.
ಬೆಲೆ ಏರಿಕೆ ಹಿನ್ನೆಲೆಯಲ್ಲಿ ಮೊಟ್ಟೆ ಪೂರೈಕೆ ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ. ಟೆಂಡರ್ನಲ್ಲಿ ನಮೂದಿಸಿರುವ ಮೊತ್ತಕ್ಕೆ ಪೂರೈಸಿದರೆ ಪ್ರತಿ ಮೊಟ್ಟೆಗೆ ಸುಮಾರು 1.25 - 1.50 ರೂ. ನಷ್ಟ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ನಿರ್ಧಾರ ಮಾಡಲಾಗಿದೆ ಅಷ್ಟೇ. ಡಿ.ಕೆ.ಕಾಂತರಾಜು, ಅಧ್ಯಕ್ಷ, ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಟೆಂಡರ್ದಾರರು ಮೊಟ್ಟೆ ಪೂರೈಕೆ ಮಾಡುವುದಿಲ್ಲ ಎಂದು ಹೇಳಿರುವ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಖರೀದಿ ಮಾಡಲು ಹಣ ನೀಡಲಾಗುವುದು. ಜಿಪಂ ಸಿಇಒ ಅವರು ಈ ಸಂಬಂಧ ಆದೇಶ ಮಾಡಿದ್ದಾರೆ. ಪ್ರಸನ್ನ, ಡಿಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಮನಗರ