ಗ್ರಾಮ ಪಂಚಾಯಿತಿ ಸದಸ್ಯ ಕಿರುಕುಳ ನೀಡುತ್ತಾನೆಂದು ಆರೋಪಿಸಿ ಅಂಗನವಾಡಿಯಲ್ಲಿಯೇ ವಿಷ ಕುಡಿದ ಕಾರ್ಯಕರ್ತೆ; ಸಾವು -ಬದುಕಿನ ನಡುವೆ ಹೋರಾಟ

Anganwadi 19 Feb 20
Published on

ಮಂಡ್ಯ: ಮೇಲಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಅಂಗನವಾಡಿ ಕಾರ್ಯಕರ್ತೆಯೋರ್ವರು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಕಾಗೇಹಳ್ಳದದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಭಾಗ್ಯಮ್ಮ (45) ಅಂಗನವಾಡಿಯಲ್ಲಿಯೇ ವಿಷ ಸೇವಿಸಿ ಸಾಯಲು ಯತ್ನಿಸಿದರು. ಬಳಿಕ ಸ್ಥಳೀಯರು, ಅಂಗನವಾಡಿ ಸಹಾಯಕಿ ಸೇರಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಂಡ್ಯದ ಮಿಮ್ಸ್​ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಭಾಗ್ಯಮ್ಮನವರನ್ನು ಮತದಾರರ ಪಟ್ಟಿಗೆ ಹೆಸರು ಸೇರಿಸುವ ಮತ್ತು ಪರಿಷ್ಕರಣೆ ಮಾಡುವ ಕಾರ್ಯಕ್ಕೆ ನಿಯೋಜಿಸಲಾಗಿತ್ತು.

ಕೆಲವರನ್ನು ಅಕ್ರಮವಾಗಿ ಮತದಾರರ ಪಟ್ಟಿಗೆ ಸೇರಿಸುವಂತೆ ಗ್ರಾಮ ಪಂಚಾಯಿತಿ ಸದಸ್ಯ ಒತ್ತಾಯ ಮಾಡಿದ್ದ. ಒಪ್ಪದೆ ಇರುವ ಕಾರಣಕ್ಕೆ ರಾಜಕೀಯ ಪ್ರಭಾವ ಬಳಸಿ ನನ್ನನ್ನು ವರ್ಗಾವಣೆ ಮಾಡಲಾಗಿದೆ. ಕಿರುಕುಳದಿಂದ ಬೇಸತ್ತಿದ್ದೇನೆ ಎಂದು ಭಾಗ್ಯಮ್ಮ ತಿಳಿಸಿದ್ದಾರೆ.

ಭಾಗ್ಯಮ್ಮನವರನ್ನು ಕನ್ನಲಿ ಗ್ರಾಮದಿಂದ ಚನ್ನಪ್ಪನದೊಡ್ಡಿ ಗ್ರಾಮಕ್ಕೆ ವರ್ಗಾವಣೆ ಮಾಡಲಾಗಿತ್ತು ಎನ್ನಲಾಗಿದೆ. ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net