ತಹಸೀಲ್ದಾರ್ ಕಚೇರಿ ಎದುರಿಗೆ ಅಂಗನವಾಡಿ ನೌಕರರ ಹೋರಾಟ ಶಿಫ್ಟ್

Anganwadi workers struggle shift in front of Tehsildar office
ಮುದ್ದೇಬಿಹಾಳ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರಿಗೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳು ಎಐಯುಟಿಯುಸಿ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.ಶಿರಸ್ತೇದಾರ ಎ.ಬಿ.ಹಿರೇಮಠ ಇದ್ದರು.
Published on

ಮುದ್ದೇಬಿಹಾಳ: ಪಟ್ಟಣದ ಸಿಡಿಪಿಒ ಕಚೇರಿ ಎದುರು ಕಳೆದ ನಾಲ್ಕು ದಿನಗಳಿಂದ ಐದು ಬೇಡಿಕೆಗಳ ಈಡೇರಿಕೆಗೆ ಸತ್ಯಾಗ್ರಹ ನಡೆಸುತ್ತಿದ್ದ ಅಂಗನವಾಡಿ ನೌಕರರು ಶುಕ್ರವಾರ ಐದನೇ ದಿನದ ಹೋರಾಟವನ್ನು ತಹಸೀಲ್ದಾರ್ ಕಚೇರಿ ಎದುರಿಗೆ ಸ್ಥಳಾಂತರಿಸಿದ್ದಾರೆ.

ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ರ‌್ಯಾಲಿ ನಡೆಸಿ ತಹಸೀಲ್ದಾರ್ ಕಚೇರಿ ಆಗಮಿಸಿದ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕಚೇರಿ ಆವರಣದಲ್ಲಿ ಹೋರಾಟ ಆರಂಭಿಸಿದರು.

ಎಐಯುಟಿಯುಸಿ ಮುಖಂಡ ಮಲ್ಲಿಕಾರ್ಜುನ ಎಚ್.ಟಿ., ಮಾತನಾಡಿ, ಅಂಗನವಾಡಿ ನೌಕರರ ಸಮಸ್ಯೆಗಳನ್ನು ಬಗೆಹರಿಸಬೇಕಾದ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ. ತಹಸೀಲ್ದಾರ್ ಕಚೇರಿ ಎದುರಿಗೆ ಹೋರಾಟ ಸ್ಥಳಾಂತರಿಸಿದ್ದು ಇಲ್ಲಿ ಬೇಡಿಕೆ ಈಡೇರುವವರೆಗೂ ಮುಂದುವರೆಸುತ್ತೇವೆ ಎಂದರು.

ಅಂಗನವಾಡಿ ನೌಕರರ ಸಂಘದ ತಾಲೂಕಾಧ್ಯಕ್ಷೆ ಸಾವಿತ್ರಿ ನಾಗರತ್ತಿ, ಪ್ರಧಾನ ಕಾರ್ಯದರ್ಶಿ ರೇಣುಕಾ ಹಡಪದ, ಸುವರ್ಣಾ ಕಾಳೆ, ಶೈಲಾ ರಾಠೋಡ, ಮಾದೇವಿ ನಾಗೋಡ, ಗುರುಬಾಯಿ ಮಳಗೌಡ್ರ, ಕಲಾವತಿ ವಂದಾಲ, ಶಮ್ಸಾದ್ ಹುಣಶ್ಯಾಳ, ಬಸಮ್ಮ ಮಾದರ, ಜಯಶ್ರೀ ಕಟ್ಟಿಮನಿ, ಶಕುಂತಲಾ ಮುರಾಳ ಇತರರಿದ್ದರು.

ಸಮಸ್ಯೆ ಬಗೆಹರಿಸುವ ಭರವಸೆ

ಅಂಗನವಾಡಿ ನೌಕರರ ಪ್ರತಿಭಟನೆ ಕುರಿತು ಜಿಪಂ ಸಿಇಒ ರಾಹುಲ್ ಶಿಂಧೆ ಅವರನ್ನು ಮಾಧ್ಯಮದವರು ಪ್ರಶ್ನಿಸಿದಾಗ ಇದು ನನ್ನ ಗಮನಕ್ಕೆ ಬಂದಿಲ್ಲ. ಸಮಸ್ಯೆಯ ಮಾಹಿತಿ ಪಡೆದು ಪರಿಹಾರಕ್ಕೆ ಯತ್ನಿಸುತ್ತೇನೆ. ಖಾತೆಗಳ ಹೊಂದಾಣಿಕೆ ಆಗದೇ ಇದ್ದಾಗ ಕಾರ್ಯಕರ್ತೆಯರ ವೇತನ ಜಮೆಯಾಗದಿರಬಹುದು. ನೌಕರರು ತಮ್ಮನ್ನು ಕಚೇರಿ ಸಮಯದಲ್ಲಿ ಬಂದು ಭೇಟಿ ಮಾಡಲು ವಿನಂತಿಸುವೆ ಎಂದರು.

ಹೋರಾಟ ರಾಜಕೀಯ ಪ್ರೇರಿತ

ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿರುವ ಹೋರಾಟದ ಹಿಂದೆ ಕೆಲವು ರಾಜಕೀಯ ವ್ಯಕ್ತಿಗಳ ಕುಮ್ಮಕ್ಕಿದೆ. ಹಿಂಬದಿಯಲ್ಲಿ ಬೆನ್ನೆಲುಬಾಗಿ ನಿಂತಿರುವ ಅಂಗನವಾಡಿ ಮೇಲ್ವಿಚಾರಕರನ್ನು ಮೊದಲು ಸಸ್ಪೆಂಡ್ ಮಾಡಬೇಕು ಎಂದು ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ನೀಲಮ್ಮ ಬೋರಾವತ್ ಆಗ್ರಹಿಸಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳ, ಗರ್ಭಿಣಿಯರ ಅಪೌಷ್ಟಿಕತೆಯ ಕುರಿತು ಸರ್ವೆ ನಡೆಸಲು ಸರ್ಕಾರ ಸೂಚಿಸಿದೆ. ಇದರಿಂದ ನುಣುಚಿಕೊಳ್ಳಲು ಇವರು ಬೇರೆ ದಾರಿ ಹಿಡಿದಿದ್ದಾರೆ. ನಮ್ಮ ಅಂಗನವಾಡಿ ನೌಕರರು ಪ್ರತಿಭಟನೆ ನಡೆಸುತ್ತಿರುವುದು ಸರಿಯೋ ತಪ್ಪೋ ಎಂದು ನಾನು ಹೇಳುವುದಿಲ್ಲ. ಆದರೆ ರಾಜಕೀಯ ವ್ಯಕ್ತಿಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿರುವುದಕ್ಕೆ ವಿರೋಧವಿದೆ ಎಂದರು. ಶೋಭಾ ಕಾಖಂಡಕಿ, ಶೋಭಾ ಘಾಟಗೆ, ನಿಂಬೆಕ್ಕ ಕಾಳಾಪುರ, ನೀಲಮ್ಮ ತೊಂಡಿಹಾಳ, ಅಂಬುಜಾ ಕುಲಕರ್ಣಿ, ಮಂಗಳಾ ಪುರಾಣಿಕಮಠ, ರಾಜೇಶ್ವರಿ ಮಮದಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net