

ಹೊನ್ನಾಳಿ: ಅಂಗನವಾಡಿ ಕೇಂದ್ರಗಳಲ್ಲಿರುವ ಶಿಶುಕೇಂದ್ರದ ಪರ್ಯಾಯವಾಗಿ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿ ಪ್ರಾರಂಭಿಸುತ್ತಿರುವುದನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಧರಣಿ ನಡೆಸಿದರು.
ತಾಲೂಕು ಕಚೇರಿ ಮುಂಭಾಗ ಧರಣಿ ನಡೆಸಿ ಗ್ರೇಡ್ 2 ತಹಸೀಲ್ದಾರ್ ಸುರೇಶ್ ಹಾಗೂ ಸಿಡಿಪಿಒ ಮಹಾಂತೇಶ್‌ಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಐಟಿಸಿ ತಾಲೂಕು ಅಧ್ಯಕ್ಷೆ ಚನ್ನಮ್ಮ, ಕಳೆದ 48 ವರ್ಷಗಳಿಂದ ಮಕ್ಕಳ ಆರೋಗ್ಯ ಹಾಗೂ ಲಾಲನೆ ಪಾಲನೆ ಮಾಡುತ್ತಿದ್ದೇವೆ. ಆದರೆ, ಇದೀಗ ಸರ್ಕಾರ ಶಾಲಾ ಆವರಣದಲ್ಲಿಯೇ ಶಾಲಾಪೂರ್ವ ತರಗತಿ ಪ್ರಾರಂಭಿಸುತ್ತಿರುವುದು ಅಂಗನವಾಡಿ ಕೇಂದ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದರು.
ಈ ಕೂಡಲೇ ಸರ್ಕಾರಿ ಶಾಲೆಗಳಲ್ಲಿ ಪೂರ್ವ ತರಗತಿಗಳನ್ನು ಪ್ರಾರಂಭಿಸುವುದನ್ನು ಸರ್ಕಾರ ಕೈಬಿಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಸರ್ಕಾರ ಪ್ರಚಾರ ಮಾಡುತ್ತಾ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಂಗನವಾಡಿ ಕಾರ್ಯಕರ್ತೆಯರಿಗೆ 1 ಸಾವಿರ ರೂ. ಹಾಗೂ ಸಹಾಯಕ ಕಾರ್ಯಕರ್ತೆಯರಿಗೆ 10 ಸಾವಿರ ರೂ. ಹೆಚ್ಚಿಸುವ ಬಗ್ಗೆ ಭರವಸೆ ನೀಡಿದ್ದರು. ಆದರೆ, ಸರ್ಕಾರ ಬಂದು ನೂರು ದಿನಗಳು ಕಳೆದರೂ ಈವರೆಗೂ ನೀಡಿದ್ದ ಭರವಸೆ ಈಡೇರಿಸಿಲ್ಲ. ತಕ್ಷಣ ಭರವಸೆ ಈಡೇರಿಸದಿದ್ದರೆ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಂಗನವಾಡಿ ಕಾರ್ಯಕರ್ತರು ಗ್ರಾೃಚುಟಿ ಪಡೆಯಲು ಅರ್ಹರು ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದ್ದರೂ ಇದುವರೆಗೂ ಗ್ರಾೃಚುಟಿ ನೀಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.
ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಸರ್ಕಾರ ವಿರುದ್ಧ ನಿರಂತರ ಹೋರಾಟ ಪ್ರಾರಂಭಿಸಬೇಕಾಗುತ್ತದೆ ಎಂದು ಹೇಳಿದರು.
ಎಐಟಿಸಿ ತಾಲೂಕು ಮುಖಂಡರಾದ ರೇಣುಕಮ್ಮ, ಗೀತಾ, ಶಾರದಾದೇವಿ, ಲಲಿತಾ, ಹಾಲಮ್ಮ, ಗಿರಿಜಮ್ಮ, ಅನುಸೂಯಾ, ಯಶೋಧಾ, ಜ್ಯೋತಿ, ಉಮಾ, ಜಯಮ್ಮ, ಚಂದ್ರಮ್ಮ, ಶಾಂತಮ್ಮ ಇತರರು ಇದ್ದರು.