

ಕೊಳ್ಳೇಗಾಲ: ಪಟ್ಟಣದ ಸಿಡಿಪಿಒ ಕಚೇರಿಯಲ್ಲಿ ಹಣ ಹಂಚಿಕೆ ವಿಡಿಯೋ ವೈರಲ್ ಪ್ರಕರಣ ಭೇದಿಸಲು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಸಿಡಿಪಿಒ ಕಚೇರಿಗೆ ಚಾಮರಾಜನಗರ ನೋಡಲ್ ಅಧಿಕಾರಿ ಉಷಾ ಅವರು ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ, ಅಂಗನವಾಡಿ ಕಾರ್ಯಕರ್ತೆಯರನ್ನು ವಿಚಾರಣೆ ನಡೆಸಿದ್ದಾರೆ.
ಹಣ ಹಂಚಿಕೆ ವಿಡಿಯೋ ವೈರಲ್ ಆಗಿತ್ತು. ಸಾರ್ವಜನಿಕ ವಲಯದಲ್ಲಿ ಇದು ತೀವ್ರ ಚೆರ್ಚೆಗೀಡಾಗಿತ್ತು. ಈ ಬಗ್ಗೆ ಸಿಡಿಪಿಒ ಅವರು ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿದ ಪ್ರವಾಸದ ಹಣ ಎಂದು ತಿಳಿಸಿದ್ದರು. ಆದರೆ, ವಿಡಿಯೋದಲ್ಲಿ ಹಂಚಿಕೆಯಾಗಿರುವ ಹಣವು ಮಕ್ಕಳು, ಬಾಣಂತಿಯರು, ಗರ್ಭಿಣಿಯರಿಗೆ ವಿತರಿಸುವ ಮೊಟ್ಟೆ ಹಣವೆಂದು ಕಾಮಗಾರಿ ಅಂಗನವಾಡಿ ಕಾಯಕರ್ತೆ ಸುಂದ್ರಮ್ಮ ಹೇಳಿಕೆ ನೀಡಿದ್ದರು.
ಈ ವಿಚಾರದಲ್ಲಿ ಸಿಡಿಪಿಒ ಹಾಗೂ ಅಂಗನವಾಡಿ ಕಾರ್ಯಕರ್ತೆ ಹೇಳಿಕೆಗಳು ಹೊಂದಾಣಿಕೆ ಆಗಿರಲಿಲ್ಲ. ಈ ಪ್ರಕರಣದ ಒಳಗಿನ ಸತ್ಯಾಂಶ ಹೊರತರಲು ಇಲಾಖೆ ಪ್ರಕಣರದ ಬೆನ್ನತ್ತಿದೆ. ತನಿಖೆಯ ಭಾಗವಾಗಿ ಬೆಂಗಳೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಚಾಮರಾಜನಗರದ ನೋಡಲ್ ಅಧಿಕಾರಿ ಉಷಾ ಅವರು ಪ್ರತ್ಯೇಕವಾಗಿ ಅಂಗನವಾಡಿ ಕಾರ್ಯಕರ್ತೆ ಸುಂದ್ರಮ್ಮ, ಸಿಡಿಪಿಒ ನಂಜಮಣಿ ಹಾಗೂ ಹಲವು ಅಂಗನವಾಡಿ ಕಾರ್ಯಕರ್ತೆಯ ಹೇಳಿಕೆಯನ್ನು ಸಂಗ್ರಹಿಸಿದ್ದಾರೆ. ವಿಡಿಯೋದಲ್ಲಿ ಹಂಚಿರುವ ಹಣ ಮೊಟ್ಟೆ ಹಣವಾಗಿದೆ. ಪತ್ರಿಕೆಗಳಲ್ಲಿ ಬಂದ ವಿಚಾರ ಸತ್ಯವಾಗಿದೆ. ನಾನು ಸಹ 6 ರೂ.ಕೊಡುವ ಬದಲು 4 ರೂ. ಕೊಡುತ್ತಿರುವುದನ್ನು ವಿರೋಧಿಸಿದ್ದೇನೆ ಎಂದು ನೋಡಲ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಈ ಬಗ್ಗೆ ವಿಜಯವಾಣಿಗೆ ನೋಡಲ್ ಅಧಿಕಾರಿ ಉಷಾ ಪ್ರತಿಕ್ರಿಯಿಸಿ, ಅಂಗನವಾಡಿ ಕಾರ್ಯಕರ್ತೆಯರ ಹೇಳಿಕೆ ಆಧರಿಸಿ ತನಿಖೆ ನಡೆಸಲಾಗುವುದು. ಸಿಡಿಪಿಒ, ಸೂಪರ್‌ವೈಸರ್ ಹೇಳಿಕೆ ಪಡೆಯಲಾಗುತ್ತಿದೆ. ಇದರ ಆಧಾರದ ಮೇಲೆ ವರದಿ ತಯಾರಿಸಲಾಗುತ್ತದೆ ಎಂದರು. ತನಿಖೆ ಕಾರ್ಯಾಚರಣೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ದಿನೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಮುಕ್ತರ್ ಇದ್ದರು.