ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ; ಅಗತ್ಯ ಮೂಲ ಸೇವೆಗಳ ಖಾಸಗೀಕರಣದ ಪ್ರಸ್ತಾಪ ಹಿಂಪಡೆಯುವಂತೆ ಒತ್ತಾಯ

07Tmk_Anganwadi_Protest
Published on

ತುಮಕೂರು: ಆರೋಗ್ಯ, ಬಿಸಿಯೂಟ, ಶಿಕ್ಷಣ ಮೊದಲಾದ ಅಗತ್ಯ ಮೂಲ ಸೇವೆಗಳ ಖಾಸಗೀಕರಣದ ಪ್ರಸ್ತಾಪಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ ಹಾಗೂ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದ ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕ ವಲಯದ ಉದ್ದಿಮೆಗಳ ಹಾಗೂ ಸೇವೆಗಳ ಖಾಸಗೀಕರಣ ನಿಲ್ಲಿಸಬೇಕು. ಅಂಗನವಾಡಿ ಕಾರ್ಯಕರ್ತೆಯರನ್ನು ಕಾರ್ವಿುಕರೆಂದು ಪರಿಗಣಿಸಿ ಕಾಯಂಗೊಳಿಸಬೇಕು. ಪ್ರತೀ ತಿಂಗಳಿಗೆ 21000 ರೂಪಾಯಿ ಹಾಗೂ ಮಾಸಿಕ ಪಿಂಚಣಿ 10,000 ರೂಪಾಯಿ ಕೊಡಬೇಕು. ಇಎಸ್​ಐ ಮತ್ತು ಪಿಎಫ್ ನೀಡಬೇಕು ಎಂದು ಆಗ್ರಹಿಸಿದರು.

ಕಾರ್ವಿುಕ ಕಾನೂನುಗಳನ್ನು ಮಾಲೀಕರ ಪರವಾಗಿ ಬದಲಾಯಿಸುವುದನ್ನು ನಿಲ್ಲಿಸಬೇಕು. ಕರೊನಾ ಸಂಕಷ್ಟದ ನೆಪವೊಡ್ಡಿ ಕೆಲಸದ ಅವಧಿ ಹೆಚ್ಚಿಸುವುದನ್ನು ಕೈಬಿಡಬಬೇಕು. ಆದಾಯ ತೆರಿಗೆ ಪಾವತಿಸಲಾಗದ ಎಲ್ಲ ಬಡ ಕುಟುಂಬಗಳಿಗೆ 6 ತಿಂಗಳ ಕಾಲ ಪ್ರತೀ ತಿಂಗಳಿಗೆ 7500 ರೂ., ನೀಡಬೇಕು. ಉಚಿತ ಪಡಿತರ ಆಹಾರ ಧಾನ್ಯ ಕೊಡುವಂತೆ ಪ್ರತಿಭಟನಾನಿರತರು ಒತ್ತಾಯಿಸಿದರು.

ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಕರೊನಾ ಸೋಂಕು ತಡೆಗಟ್ಟಲು ದುಡಿಯುತ್ತಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮತ್ತಿತರಿಗೆ ಸುರಕ್ಷತಾ ಸಾಧನ, ಪಿಪಿಇ ಕಿಟ್​ಗಳನ್ನು ನೀಡಬೇಕು. ಕರೊನಾ ಸೇನಾನಿಗಳು ಸತ್ತರೆ 50 ಲಕ್ಷ ರೂ., ವಿಮಾ ಸೌಲಭ್ಯ ಖಾತ್ರಿಪಡಿಸಬೇಕು. ಅವಲಂಬಿತರಿಗೆ ಪಿಂಚಣಿ ಹಾಗೂ ಕಾಯಂ ಉದೋಗ ಕಲ್ಪಿಸಬೇಕು. ಕೆಲಸದ ಒತ್ತಡಗಳಿಂದ 23 ನೌಕರರು ನಿಧನರಾಗಿದ್ದು ಇವರಿಗೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ್ ಮೂಲಕ ಮನವಿ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು. ತುಮಕೂರು ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಗೌರಮ್ಮ, ವಿನೋದ, ಖಜಾಂಚಿ ಜಬೀನ, ಪುಷ್ಪಾ, ನಾಗರತ್ನಾ, ಗೌರಮ್ಮ, ರಾಜಮ್ಮ, ಅನಸೂಯ, ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ ಪ್ರತಿಭಟನೆ ನೇತೃತ್ವವಹಿಸಿದ್ದರು.

ಬೇಡಿಕೆ ಈಡೇರಿಸಿ ಕೆಲಸದಲ್ಲಿದ್ದಾಗ ಸೋಂಕಿತರಾಗುವ ಎಲ್ಲ ಕಾರ್ವಿುಕರಿಗೂ ಕನಿಷ್ಟ 10 ಲಕ್ಷ ರೂ., ಪರಿಹಾರ ನಿಧಿ ನೀಡಬೇಕು. ಅಕ್ಷರ ದಾಸೋಹದಲ್ಲಿ ಕೇಂದ್ರೀಕೃತ ಅಡುಗೆ ಪದ್ಧತಿ ಹಾಗೂ ಗುತ್ತಿಗೆ ಪದ್ಧತಿ ಜಾರಿ ಮಾಡಬಾರದು. ಕ್ವಾರೈಂಟೆನ್​ನಲ್ಲಿ ಕೆಲಸ ನಿರ್ವಹಿಸುತ್ತಿರುವ ಬಿಸಿಯೂಟ ನೌಕರರಿಗೆ ವೇತನ ಪಾವತಿ ಮಾಡಬೇಕು. ಅಂಗನವಾಡಿ ಕೇಂದ್ರದ ಮಕ್ಕಳಿಗೆ ವೈದ್ಯಕೀಯ ತಪಾಸಣೆ ಮುಂದೂಡಬೇಕು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net