ಗ್ರಾೃಜ್ಯುಯಿಟಿ, ವೇತನ ಹೆಚ್ಚಳಕ್ಕೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಆಗ್ರಹ

6
Published on

ಮೈಸೂರು: ಸರ್ಕಾರಿ ನೌಕರರ ವೇತನ, ಗ್ರಾಜ್ಯುಯಿಟಿ ಹೆಚ್ಚಳ ಮಾಡಿದಂತೆ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರಿಗೆ ವೇತನ ಹೆಚ್ಚಳ ಮಾಡಿ ನಿವೃತ್ತಿ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎ.ವಿಜಯಭಾಸ್ಕರ್ ಸರ್ಕಾರವನ್ನು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಷನ್‌ನಿಂದ ನಗರದ ಕೆ.ಆರ್.ವನಂನ ಶ್ರೀರಾಮಸೇವಾ ಅರಸು ಮಂಡಳಿಯಲ್ಲಿ ಭಾನುವಾರ ಆಯೋಜಿಸಿದ್ದ ಎರಡನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಬೇಡಿಕೆ ಈಡೇರಿಸುವಂತೆ ಹಲವು ವರ್ಷಗಳಿಂದಲೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಆದರೂ, ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ರಾಜ್ಯ ಸರ್ಕಾರಿ ನೌಕರರ ವೇತನ, ಗ್ರಾಜ್ಯುಯಿಟಿ ಹೆಚ್ಚಳ ಮಾಡಿದಂತೆ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರಿಗೂ ವೇತನ ಹೆಚ್ಚಳ ಮಾಡಿ ನಿವೃತ್ತಿ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಇಲ್ಲವಾದರೆ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಹೇಳಿದರು.
ಸರ್ಕಾರಿ ನೌಕರರ ವೇತನ ಹೆಚ್ಚು ಮಾಡಿರುವ ಸರ್ಕಾರ, ಅಂಗನವಾಡಿ ಕಾರ್ಯಕರ್ತೆಯರ ವೇತನ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಬಿಸಿಯೂಟ, ಕಟ್ಟಡ ಕಾರ್ಮಿಕರು, ಕೈಗಾರಿಕಾ ಕಾರ್ಮಿಕರು, ತೋಟದ, ಬೀಡಿ ಕಾರ್ಮಿಕರನ್ನು ಒಟ್ಟುಗೂಡಿಸಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಇವರಿಗೂ ಸೌಲಭ್ಯ ದೊರೆಯುತ್ತಿಲ್ಲ ಎಂದರು.
ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕೆಂದು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ತೀರ್ಪು ನೀಡಿತ್ತು. ಆದರೆ, ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲ್ ಅವರು ಸುಪ್ರೀಂಕೋರ್ಟ್ ಮೊರೆ ಹೋದಾಗ ಗೌರವಧನ ಪಡೆಯುವವರು ಸರ್ಕಾರಿ ನೌಕರರು ಅಲ್ಲ ಎನ್ನುವ ತೀರ್ಪು ನೀಡಿದ್ದರಿಂದ ಪರಿಗಣಿಸಿಲ್ಲ. ಆದರೆ ಗ್ರಾಜ್ಯುಟಿ ವ್ಯಾಪ್ತಿಗೆ ಸೇರಿಸಿದ್ದರೂ ಈತನಕ ಆದೇಶ ನೀಡಿಲ್ಲ ಎಂದು ಕಿಡಿಕಾರಿದರು.
ಅಂಗನವಾಡಿಯಲ್ಲಿ ಕೆಲಸ ಮಾಡುವವರಿಗೆ ಸರ್ಕಾರದಿಂದ ಕೊಡುವ ಗೌರವಧನದಿಂದ ಗೌರವವಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ಕನಿಷ್ಠ ವೇತನ ಕಾಯಿದೆ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಹೇಳಿಕೊಂಡು ಬಂದರೂ ಈತನಕ ಸಫಲವಾಗಿಲ್ಲ ಎಂದು ಹೇಳಿದರು.

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಷನ್ ಜಿಲ್ಲಾ ಸಂಚಾಲಕ ಜಗನ್ನಾಥ್ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆ ರಾಜ್ಯಾಧ್ಯಕ್ಷ ಬಿ.ಅಮ್ಜದ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಜಯಮ್ಮ, ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಎನ್.ಕೆ.ದೇವದಾಸ್, ಎಐಟಿಯುಸಿ ಕಟ್ಟಡ ಕಾರ್ಮಿಕ ಸಂಘಟನೆ ಪ್ರಧಾನ ಕಾರ್ಯದರ್ಶಿ ಕೆ.ಜಿ.ಸೋಮರಾಜೇ ಅರಸ್, ಪದಾಧಿಕಾರಿಗಳಾದ ವೈ.ಮಹದೇವಮ್ಮ, ಪಿ.ಎಂ.ಸರೋಜಮ್ಮ, ಕಾಂತಮ್ಮ, ಭಾಗ್ಯ, ಸುಮಾ, ಸಿ.ಚಂದ್ರಮ್ಮ, ಪುಟ್ಟಮ್ಮ, ಗಿರಿಜಾ, ಭುವನೇಶ್ವರಿ, ಚಂದ್ರಿಕಾ ಇತರರು ಇದ್ದರು.

ನಗರದ ವಿವಿಧೆಡೆ ಮೆರವಣಿಗೆ
ಎರಡನೇ ಜಿಲ್ಲಾ ಸಮ್ಮೇಳನದ ಅಂಗವಾಗಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರಿಂದ ನಗರದ ವಿವಿಧೆಡೆ ಮೆರವಣಿಗೆ ನಡೆಯಿತು.
ಅರಮನೆ ಮುಂಭಾಗದ ಗನ್‌ಹೌಸ್‌ನಿಂದ ಹೊರಟು ಬಸವೇಶ್ವರ ವೃತ್ತ, ಅಗ್ರಹಾರ ಸರ್ಕಲ್, ಸಿದ್ದಪ್ಪ ವೃತ್ತ, ನಂಜುಮಳಿಗೆ ವೃತ್ತ, ಮಾನಂದವಾಡಿ ರಸ್ತೆಯ ಮೂಲಕ ಕೆ.ಆರ್. ವನಂನಲ್ಲಿರುವ ಅರಸು ಸಭಾಂಗಣವನ್ನು ತಲುಪಿತು.

ಮೆರವಣಿಗೆ ಉದ್ದಕ್ಕೂ ಜಿಂದಾಬಾದ್, ಜಿಂದಾಬಾದ್ ಎಐಟಿಯುಸಿ ಜಿಂದಾಬಾದ್, ಅಂಗನವಾಡಿ ಕಾರ್ಯಕರ್ತೆಯರ ಹೋರಾಟಕ್ಕೆ ಜಯವಾಗಲಿ, ಘೋಷಿಸಲಿ ಘೋಷಿಸಲಿ ಸರ್ಕಾರಿ ನೌಕರರೆಂದು ಘೋಷಿಸಲಿ ಮೊದಲಾದ ಘೋಷಣೆಗಳು ಮೊಳಗಿದವು.

ಹಕ್ಕೋತ್ತಾಯಗಳು

  • 2023ರ ಏಪ್ರಿಲ್ ಒಂದಕ್ಕಿಂದ ಮೊದಲು ನಿವೃತ್ತರಾದ ಎಲ್ಲ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ 1972ರ ಕಾಯ್ದೆಯ ಪ್ರಕಾರ ಗ್ರಾಜ್ಯುಟಿ ನೀಡಬೇಕು.
    *ನಿವೃತ್ತಿ ಹೊಂದಿದವರಿಗೆ ಪಿಂಚಣಿ ಜಾರಿ ಮಾಡಬೇಕು, ಗ್ರಾಜ್ಯುಯಿಟಿ ಆದೇಶದಲ್ಲಿರುವವರು ಗರಿಷ್ಠ ಮಿತಿ 30 ವರ್ಷ ಸೀಲಿಂಗ್ ಇರುವುದನ್ನು ತೆಗೆಯಬೇಕು.
  • ಐಸಿಡಿಸಿ ಯೋಜನೆ ಬಲಪಡಿಸಬೇಕು. ಎಲ್ಲ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯ ಪುಸ್ತಕಗಳ ನೀಡಬೇಕು.
  • ಅಂಗನವಾಡಿ ಕೇಂದ್ರದಿಂದ ಮಗು ಒಂದನೇ ತರಗತಿಗೆ ಹೋಗುವಾಗ ವರ್ಗಾವಣೆ ಪತ್ರವನ್ನು ನೀಡುವುದಕ್ಕೆ ಸರ್ಕಾರ ಕ್ರಮವಹಿಸಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net