ಮುದ್ದೇಬಿಹಾಳ: ಇಲ್ಲಿನ ಪಿಲೇಕೆಮ್ಮನಗರದ ಅಂಗನವಾಡಿ ಕೇಂದ್ರ ನಂ.1ರಲ್ಲಿ ಕಳೆದ ನ.8 ರಂದು ಕಾರ್ಯಕರ್ತೆಯರಾದ ರೇಣುಕಾ ಲಮಾಣಿ, ಶಾಂತಾ ಮಾಮನಿ ಅವರು ಪರಸ್ಪರ ಬಡಿದಾಡಿಕೊಂಡಿದ್ದ ಘಟನೆಯಲ್ಲಿ ಶಾಂತಾ ಅವರ ವಿರುದ್ಧ ರೇಣುಕಾ ಅವರು ಎಸ್ಸಿ, ಎಸ್ಟಿ, ಬಿಎನ್‌ಎಸ್ ಕಾಯ್ದೆಗಳ ಅಡಿಯಲ್ಲಿ ನ.13 ರಂದು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ರೇಣುಕಾ ಅವರು ಪ್ರಕರಣ ದಾಖಲಿಸಿದ ಕುರಿತು ಶನಿವಾರ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ. ತಾನು ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆದ ಕಾರಣ ಪ್ರಕರಣ ದಾಖಲಿಸಲು ವಿಳಂಬವಾಗಿದೆ ಎಂದು ರೇಣುಕಾ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಬಸವನಬಾಗೇವಾಡಿ ಡಿಎಸ್ಪಿ ಬಲ್ಲಪ್ಪ ನಂದಗಾಂವಿ ಅವರು ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಯ್ ತಿಪ್ಪರಡ್ಡಿ ಅವರ ನೆರವಿನೊಂದಿಗೆ ಘಟನೆ ನಡೆದಿರುವ ಅಂಗನವಾಡಿ ಕೇಂದ್ರಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿ ಅಕ್ಕಪಕ್ಕದವರಿಂದ ಮಾಹಿತಿ ಸಂಗ್ರಹಿಸಿದ್ದಾರೆ.
ಶಾಂತಾ ಅವರನ್ನು ಎರಡು ಬಾರಿ ಠಾಣೆಗೆ ಕರೆಸಿಕೊಂಡು ವಿಚಾರಣೆಯನ್ನೂ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಏತನ್ಮಧ್ಯೆ ಶಾಂತಾಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ನ.11ರಿಂದ ಇಲ್ಲಿನ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸೇವಾ ಸಂಘದವರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಮುಂದುವರಿದಿದ್ದು ಶನಿವಾರ 6 ದಿನ ಪೂರೈಸಿದೆ.