ಅಂಗನವಾಡಿ ಕಾರ್ಯಕರ್ತೆ, ಆಹಾರ ಪೂರೈಕೆ ಏಜೆನ್ಸಿಗೆ ನೋಟಿಸ್

FotoJet16
Published on

ಬೆಲ್ಲದ ಪ್ಯಾಕೆಟ್‌ನಲ್ಲಿ ಇಲಿ ಅವಶೇಷ ಪತ್ತೆ ಪ್ರಕರಣ ಸಿಡಿಪಿಒ ಪರಿಶೀಲನೆ

ಗುಡಿಬಂಡೆ: ಅಂಗನವಾಡಿ ಕೇಂದ್ರದಿಂದ ಮಕ್ಕಳಿಗೆ ವಿತರಿಸಿದ್ದ ಬೆಲ್ಲದ ಪ್ಯಾಕೆಟ್‌ನಲ್ಲಿ ಸತ್ತ ಇಲಿಯ ಕೂದಲು ಗಡ್ಡೆಯಂತಿರುವುದು ಹಾಗೂ ದುರ್ವಾಸನೆ ಬರುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಗನವಾಡಿ ಕಾರ್ಯಕರ್ತೆ ಮತ್ತು ಆಹಾರ ಸರಬರಾಜು ಮಾಡುವ ಏಜೆನ್ಸಿ ಮಾಲೀಕರಿಗೆ ಸಿಡಿಪಿಒ ರಫೀಕ್ ನೋಟಿಸ್ ಜಾರಿಮಾಡಿದ್ದಾರೆ.


ತಾಲೂಕಿನ ಹಂಪಸಂದ್ರ ಗ್ರಾಮ ಪಂಚಾಯಿತಿಯ ಗರುಡಾಚರ್ಲಹಳ್ಳಿಯ ಅಂಗನವಾಡಿ ಕೇಂದ್ರದಿಂದ ಅದೇ ಗ್ರಾಮದ ಮಕ್ಕಳಿಗೆ ಪ್ರತಿ ತಿಂಗಳು ಪೌಷ್ಟಿಕತೆ ಹೆಚ್ಚಿಸುವ ನಿಟ್ಟಿನಲ್ಲಿ ನೀಡುತ್ತಿರುವ ಆಹಾರಗಳಲ್ಲಿ ಒಂದಾದ ಬೆಲ್ಲದ ಪ್ಯಾಕೆಟ್ ತೆಗೆದಾಗ ಅದರಲ್ಲಿ ಇಲಿಯ ಕೂದಲು ಹಾಗೂ ಕಪ್ಪು ಬಣ್ಣದ ಉಂಡೆಗಳು ಕಾಣಿಸಿಕೊಂಡು ದುರ್ವಾಸನೆ ಬರುತ್ತಿತ್ತು. ಈ ಬಗ್ಗೆ ‘ವಿಜಯವಾಣಿ’ಯು ‘ಬೆಲ್ಲದ ಪ್ಯಾಕೆಟ್‌ನಲ್ಲಿ ಸತ್ತ ಇಲಿಯ ಅವಶೇಷ’ ಶೀರ್ಷಿಕೆಯಲ್ಲಿ ಭಾನುವಾರ ವರದಿ ಪ್ರಕಟಿಸಿತ್ತು.


ಬಳಿಕ ಎಚ್ಚೆತ್ತುಕೊಂಡ ಸಿಡಿಪಿಒ ರಫೀಕ್ ಭಾನುವಾರ ಬೆಳಗ್ಗೆಯೇ ಗ್ರಾಮದ ಅಂಗನವಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ಸಂಬಂಧ ಅಂಗನವಾಡಿ ಕಾರ್ಯಕರ್ತೆ ಮತ್ತು ಆಹಾರ ಸರಬರಾಜು ಮಾಡುವ ಬಾಗೇಪಲ್ಲಿ ತಾಲೂಕಿನ ಯಲ್ಲಂಪಲ್ಲಿಯ ಎಂಎಸ್‌ಪಿಸಿ ಏಜೆನ್ಸಿ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಅಲ್ಲದೆ ಗುಡಿಬಂಡೆ ಆಹಾರ ಸುರಕ್ಷತಾ ಅಧಿಕಾರಿಗಳು ಸ್ಥಳಕ್ಕೆ ಬಂದು ಗ್ರಾಮಸ್ಥರ ಮುಂದೆ ಪರಿಶೀಲಿಸಿದ್ದು, ಆಹಾರ ಪದಾರ್ಥ ಮತ್ತು ನೀರಿನ ಮಾದರಿಯನ್ನು ಪ್ರಯೋಗಾಲಕ್ಕೆ ಕಳುಹಿಸಲಾಗಿದೆ. ವರದಿ ಬಳಿಕ ಸರಬರಾಜುದಾರ ಹಾಗೂ ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮವಹಿಸಲಾಗುವುದು ಎಂದು ಸಿಡಿಪಿಒ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net