

ಹುಬ್ಬಳ್ಳಿ: ಹಿಂದುಗಳ ಭಾವನೆಗೆ ಧಕ್ಕೆ ಆರೋಪದಡಿ ತಲೆಮರೆಸಿಕೊಂಡಿದ್ದ ಅಂಗನವಾಡಿ ಕಾರ್ಯಕರ್ತೆ, ನಗರದ ಮೂರನೇ ಜೆಎಂಎಫ್‌ಸಿ ಕೋರ್ಟ್‌ಗೆ ಗುರುವಾರ ಹಾಜರಾಗಿದ್ದಾಳೆ. ಪ್ರಕರಣದ ಪರಾಮರ್ಶೆ ನಡೆಸಿದ ಕೋರ್ಟ್, ಏ. 2ರವರೆಗೆ (14 ದಿನ) ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ನ್ಯಾಯಾಲಯ, ಬೈತುಲ್ಲಾ ಕಿಲ್ಲೇದಾರ ಅವರನ್ನು ಧಾರವಾಡದ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿದೆ.
ಬೇರೆ ಸಮುದಾಯದ ವ್ಯಕ್ತಿ ಜತೆ ಮೊಬೈಲ್ ಫೋನ್‌ನಲ್ಲಿ ಮಾತನಾಡುವಾಗ ಹಿಂದುಗಳ ಭಾವನೆಗೆ ಧಕ್ಕೆ ಬರುವ ಹಾಗೆ ಮಾತನಾಡಿದ್ದಾರೆ ಎಂದು ಆರೋಪಿಸಿ, ಕಾರ್ಯಕರ್ತೆ ವಿರುದ್ಧ ವ್ಯಕ್ತಿಯೊಬ್ಬರು ಕಸಬಾಪೇಟೆ ಠಾಣೆಗೆ ದೂರು ನೀಡಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು, ಆಕೆಯನ್ನು ಬಂಧಿಸಲು ಬಲೆ ಬೀಸಿದ್ದರು. ಆದರೆ, ಅಂಗನವಾಡಿ ಕಾರ್ಯಕರ್ತೆ ನೇರವಾಗಿ ಕೋರ್ಟ್‌ಗೆ ಹಾಜರಾಗಿದ್ದಾಳೆ. ಮನೆಯಲ್ಲಿ ಅಂಗನವಾಡಿ ಆಹಾರಧಾನ್ಯ ಸಂಗ್ರಹ ಹಾಗೂ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣಗಳು ಕೂಡ ಈಕೆಯ ಮೇಲಿವೆ.
ಪ್ರಕರಣ ಏನು?: ಅಂಗನವಾಡಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ವಿತರಣೆ ಮಾಡುವ ಪೌಷ್ಟಿಕ ಆಹಾರದ ಚೀಲಗಳನ್ನು
ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಹಳೇಹುಬ್ಬಳ್ಳಿಯ ಗಬ್ಬೂರ ಹತ್ತಿರದ ಗೋದಾಮಿನ ಮೇಲೆ ಫೆ. 15ರಂದು ದಾಳಿ ಮಾಡಿದ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸರು, 270ಕ್ಕೂ ಹೆಚ್ಚು ಆಹಾರದ ಚೀಲಗಳನ್ನು ವಶಪಡಿಸಿಕೊಂಡಿದ್ದರು.
ಅಂಗನವಾಡಿ ಕಾರ್ಯಕರ್ತೆ ಮತ್ತು ಉಚ್ಛಾಟಿತ ಕಾಂಗ್ರೆಸ್ ನಾಯಕಿ ಹಾಗೂ ಈಕೆಯ ಪತಿ ಫಾರುಕ್ ಕಿಲ್ಲೇದಾರ ನಾಪತ್ತೆಯಾಗಿದ್ದರು. ಪತಿಯ ಮೇಲಿನ ಅಂಗನವಾಡಿ ಅನ್ನ ಕನ್ನ ಪ್ರಕರಣವೀಗ ಕೋರ್ಟ್‌ನಲ್ಲಿ ವಜಾಗೊಂಡಿದೆ.
ಅನ್ನಕ್ಕೆ ಕನ್ನ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು 32 ಜನರನ್ನು ಬಂಧಿಸಿದ್ದರು. ಇಬ್ಬರ ಪೊಲೀಸರನ್ನು ಅಮಾನತುಗೊಳಿಸಲಾಗಿತ್ತು. ರಾಜ್ಯ ಸರ್ಕಾರವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಡಾ. ಹುಲಿಗೆಮ್ಮ ಕುಕನೂರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಎ. ಮುತ್ತಣ್ಣ ಅವರನ್ನು ಅಮಾನತುಗೊಳಿಸಿತ್ತು.
ಶಾಸಕ ಮಹೇಶ ಟೆಂಗಿನಕಾಯಿ ಸದನದಲ್ಲಿ ಈ ವಿಷಯ ಪ್ರಸ್ತಾಪಿಸಿ, ಪ್ರಕರಣದ ಹಿಂದೆ ದೊಡ್ಡ ಕುಳಗಳಿವೆ. ತನಿಖೆಯಲ್ಲಿ ಪೊಲೀಸರ ವೈಫಲ್ಯವಿದೆ ಎಂದು ಆರೋಪಿಸಿದ್ದರು. ಶಾಸಕ ಪ್ರಸಾದ ಅಬ್ಬಯ್ಯ ಅವರು ಕೂಡ ಪೊಲೀಸ್ ಆಯುಕ್ತರ ವೈಫಲ್ಯ ಕುರಿತು ಜೋರಾಗಿಯೇ ಧ್ವನಿ ಎತ್ತಿದ್ದರು. ಇದಾದ ಬಳಿಕ ಈಗ ಅಂಗನವಾಡಿ ಕಾರ್ಯಕರ್ತೆ ನೇರವಾಗಿ ಕೋರ್ಟ್‌ಗೆ ಹಾಜರಾಗಿದ್ದು, ಇನ್ನೂ ಏನೇನಾಗಲಿದೆ? ಎಂಬುದು ಕುತೂಹಲ ಇಮ್ಮಡಿಯಾಗಿದೆ.