ಅಂಗನವಾಡಿ ಸಿಬ್ಬಂದಿ ಅಹೋರಾತ್ರಿ ಧರಣಿ ಅಂತ್ಯ

Anganwadi staff's overnight sit-in ends
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಂಗನವಾಡಿ ನೌಕರರು ವಿಜಯಪುರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ. ಚವಾಣ ಅವರಿಗೆ ಮನವಿ ಸಲ್ಲಿಸಿದರು. ಸುನಂದಾ ನಾಯಕ, ಭಾರತಿ ವಾಲಿ, ಅಶ್ವಿನಿ ತಳವಾರ ಮತ್ತಿತರರಿದ್ದಾರೆ.
Published on

ವಿಜಯಪುರ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳನ್ನು ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ. ಚವಾಣ ಭೇಟಿಮಾಡಿ ಮುಂಬರುವ ದಿನದಲ್ಲಿ ಸಂಘದ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆ ಕಳೆದೆರಡು ದಿನದಿಂದ ನಡೆಯುತ್ತಿದ್ದ ಧರಣಿಯು ಅಂತ್ಯಗೊಂಡಿತ್ತು.

ಅಂಗನವಾಡಿ ನೌಕರರ ಜಿಲ್ಲಾಧ್ಯಕ್ಷೆ ಸುನಂದಾ ನಾಯಕ ಮಾತನಾಡಿ, ಮುಂಗಡವಾಗಿ ಕೋಳಿ ಮೊಟ್ಟೆ, ಬಾಡಿಗೆ, ಗ್ಯಾಸ್, ತರಕಾರಿ, ಕಾಂಟೆಜಿನ್ಸಿ ಬಿಲ್‌ಗಳನ್ನು ಹಾಕದೇ ಫಲಿತಾಂಶ ಕೇಳಬಾರದು. ಅಂಗನವಾಡಿ ಕೇಂದ್ರದ ಚಟುವಟಿಕೆಗಳನ್ನು ಮೊಬೈಲ್‌ನಲ್ಲಿ ದಾಖಲೆ ನಿರ್ವಹಣೆ ಮಾಡಿದರೆ, ಪುಸ್ತಕದಲ್ಲಿ ಬರೆಯುವುದನ್ನು ನಿಲ್ಲಿಸಬೇಕು. ಘೋಷಣ್ ಟ್ರ್ಯಾಕರ್‌ನಲ್ಲಿರುವ ಫೇಸ್ ವ್ಯಾಲ್ಯು ಹಾಕಬೇಕಾದರೆ ತಾಂತ್ರಿಕ ಮತ್ತು ಪ್ರಾಯೋಗಿಕ ಸಮಸ್ಯೆಗಳನ್ನು ಬಗೆಹರಿಸಬೇಕು. ಇಲಾಖೆ ನಡೆಸುವ ಮಾಸಿಕ ಮತ್ತು ಗೌರವ ಧನದ ಸಭೆಗಳಲ್ಲಿ ಅಂಗನವಾಡಿ ನೌಕರರಿಗೆ ಕುರ್ಚಿ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಕೆ.ಕೆ. ಚವಾಣ, ಒಂದು ವಾರದ ನಂತರ ಸಂಘದ ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಸಭೆ ಕರೆದು ಚರ್ಚಿಸಿ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಅಣ್ಣಾರಾಯ ಈಳಗೇರ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ, ಜಿಲ್ಲಾ ಗೌರವಾಧ್ಯಕ್ಷೆ ಭಾರತಿ ವಾಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ವಿನಿ ತಳವಾರ, ರೈತ ಮುಖಂಡರಾದ ಭೀಮರಾಯ ಪೂಜಾರಿ, ಪ್ರತಿಭಾ ಕುರಡೆ, ಸರಸ್ವತಿ ಮಠ, ಸುವರ್ಣಾ ಹಲಗಣಿ, ಶೋಭಾ ಕಬಾಡೆ, ವಿಜಯಲಕ್ಷ್ಮೀ ಹಿಪ್ಪರಗಿ, ಚೌಡಮ್ಮ ಕಡಕೋಳಕರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net