ಹನ್ನೆರಡು ದಿನಗಳ ಬಳಿಕ ಬಾಗಿಲು ತೆರೆದ ಅಂಗನವಾಡಿ

HUN-MAY-3-1(MEETING AT HARAHALLI ANGANAVADI)
ಹುಣಸೂರು ತಾಲೂಕು ಹರಳಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಎಸಿಡಿಪಿಒ ವೀಣಾರಿಂದ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಕೇಂದ್ರದ ಬಾಗಿಲು ತೆರೆದು ಮತ್ತೆ ಚಟುವಟಿಕೆ ಆರಂಭವಾಯಿತು. ಮೇಲ್ವಿಚಾರಕಿ ಸುಮಂಗಲಿ, ಕಾರ್ಯಕರ್ತೆ ಸುಜಾತಾಬಾಯಿ, ಅಣ್ಣಯ್ಯ ಹರೀಶ್‌ಗೌಡ, ಮಹದೇವಿ ಇತರರಿದ್ದರು.
Published on

ಹುಣಸೂರು: ತಾಲೂಕಿನ ಕಿರಂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಳಹಳ್ಳಿ ಹಾಡಿಯ ಅಂಗನವಾಡಿ ಕೇಂದ್ರದ ಬಾಗಿಲು 12 ದಿನಗಳ ನಂತರ ತೆರೆದು ಫಲಾನುಭವಿಗಳಿಗೆ ಪೌಷ್ಟಿಕ ಅಹಾರ ವಿತರಿಸಲಾಯಿತು.

ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸುಜಾತಾ ಬಾಯಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲವೆಂದು ಆರೋಪಿಸಿ ಗ್ರಾಪಂ ಪಿಡಿಒ ಭವ್ಯಾ ಏ.20ರಂದು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಬಾಗಿಲಿಗೆ ಬೀಗ ಹಾಕಿ ಬಂದಿದ್ದರು. ಈ ಕುರಿತು ಕಾರ್ಯಕರ್ತೆ ಸುಜಾತಾ ಬಾಯಿ ಮಹಿಳಾ ಮತು ಮಕ್ಕಳ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಅಲ್ಲದೆ ಪಿಡಿಒರನ್ನು ಬೀಗ ಕೊಡಲು ಕೋರಿದ್ದರು. ಆದರೂ ಸ್ಥಳೀಯ ಜನಪ್ರತಿನಿಧಿಗಳ ಒತ್ತಾಯದಂತೆ ಪಿಡಿಒ ಬೀಗ ನೀಡಿರಲಿಲ್ಲ.

ಈ ಕುರಿತು ಮೇ 2ರಂದು ವಿಜಯವಾಣಿ ಪತ್ರಿಕೆಯಲ್ಲಿ ‘ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿದ ಗ್ರಾಪಂ ಅಧಿಕಾರಿ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಗೊಂಡಿತ್ತು. ವರದಿಯ ಗಂಭೀರತೆಯನ್ನು ಅರಿತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಅಂಗನವಾಡಿ ಕೇಂದ್ರಕ್ಕೆ ದೌಡಾಯಿಸಿದರು.

ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ (ಎಸಿಡಿಪಿಒ) ವೀಣಾ, ಮೇಲ್ವಿಚಾರಕಿ ಸುಮಂಗಲಿ ಮತ್ತವರ ತಂಡ ಕೇಂದ್ರಕ್ಕೆ ಭೇಟಿ ನೀಡಿ ಕೇಂದ್ರದ ಬಾಗಿಲು ತೆಗೆಸಿತು. ಈ ವೇಳೆ ಹಾಜರಿದ್ದ ಗ್ರಾಪಂ ಉಪಾಧ್ಯಕ್ಷ ಅಣ್ಣಯ್ಯ, ಸದಸ್ಯ ಹರೀಶ್‌ಗೌಡ, ಮುಖಂಡರಾದ ಗೌರಮ್ಮ, ಮಹದೇವು, ಮಹದೇವಿ, ಈರೇಗೌಡ ಮುಂತಾದವರು ಅಂಗನವಾಡಿ ಕಾರ್ಯಕರ್ತೆ ಸುಜಾತಾಬಾಯಿ ಕರ್ತವ್ಯನಿರ್ವಹಣೆಯಲ್ಲಿ ಬೇಜವಾಬ್ದಾರಿ ತೋರುತ್ತಿದ್ದರು. ಸರಿಯಾಗಿ ಪಡಿತರ ವಿತರಿಸುತ್ತಿರಲಿಲ್ಲ. ಹೀಗಾಗಿ ಬೇಸರಗೊಂಡು ಪಿಡಿಒ ಮೂಲಕ ಬೀಗ ಹಾಕಲು ಒತ್ತಾಯಿಸಿದ್ದೆವು. ಇನ್ನು ಮುಂದಾದರೂ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಒತ್ತಾಯಿಸಿದರು.

ಎಸಿಡಿಪಿಒ ವೀಣಾ ಮಾತನಾಡಿ, ಕೇಂದ್ರದ ಕಾರ್ಯಕರ್ತೆಗೆ ಈ ಕುರಿತು ಇಲಾಖೆ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇನ್ನು ಮುಂದೆ ಹೀಗಾದಲ್ಲಿ ಗ್ರಾಮಸ್ಥರು ಹಿರಿಯ ಅದಿಕಾರಿಗಳ ಗಮನಕ್ಕೆ ತನ್ನಿ. ಬದಲಾಗಿ ಕೇಂದ್ರದ ಬಾಗಿಲು ಮುಚ್ಚಿಸುವುದು ಸರಿಯಲ್ಲ. ಇದು ಮರುಕಳಿಸದಂತೆ ಸೂಕ್ತ ಕ್ರಮವಹಿಸಲಾಗುವುದು ಎಂದರು.

ಕಾರ್ಯಕರ್ತೆ ಸುಜಾತಾಬಾಯಿ ಕೇಂದ್ರದ ಸಹಾಯಕ ಅನಾರೋಗ್ಯದಿಂದ ಕಳೆದ ಮೂರು ತಿಂಗಳಿನಿಂದ ಗೈರಾಗಿದ್ದಾರೆ. ಹಾಗಾಗಿ ನನ್ನೊಬ್ಬಳಿಗೆ ಕರ್ತವ್ಯ ನಿರ್ವಹಣೆಗೆ ತೊಂದರೆಯುಂಟಾಗಿದ್ದು ನಿಜ. ಆದರೆ ಇನ್ನು ಮುಂದೆ ಹಾಗಾಗದಂತೆ ನೋಡಿಕೊಳ್ಳುತ್ತೇನೆಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net