

ನರಗುಂದ: ಪಟ್ಟಣದ ಜಮಲಾಪುರ ಓಣಿಯ ಜಮಾಲಶಾವಲಿ ದರ್ಗಾದ ಅಂಗನವಾಡಿ ಆರೋಗ್ಯ ಮತ್ತು ಪೌಷ್ಟಿಕ ಆಹಾರ ಸೇವನೆ ಜಾಗೃತಿ ಕಾರ್ಯಕ್ರಮ ಮಂಗಳವಾರ ಜರುಗಿತು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಮಲವ್ವ ಹುಲಕೋಟಿ ಮಾತನಾಡಿ, ಪೌಷ್ಟಿಕತೆ ಹೆಚ್ಚಿಸಲು ಪೋಷಣ ಅಭಿಯಾನ ಯೋಜನೆಯಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪ್ರತಿ ತಿಂಗಳು ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅಂಗನವಾಡಿಗಳು ಮಕ್ಕಳಿಗೆ ಎಲ್ಲ ರೀತಿಯ ಶಿಕ್ಷಣ ಹಾಗೂ ಶಿಕ್ಷಣೇತರ ಚಟುವಟಿಕೆಗೆ ಭದ್ರ ಬುನಾದಿಯಾಗಿದ್ದು, 6 ವರ್ಷದೊಳಗಿನ ಮಕ್ಕಳನ್ನು ಕಡ್ಡಾಯವಾಗಿ ಅಂಗನವಾಡಿ ಕೇಂದ್ರಕ್ಕೆ ದಾಖಲಿಸಬೇಕೆಂದು ಮನವಿ ಮಾಡಿದರು.
ಅಂಗನವಾಡಿ ಮೇಲ್ವಿಚಾರಕಿ ಶಕುಂತಲಾ ಗಣಿ ಮಾತನಾಡಿ, ರಾಷ್ಟ್ರೀಯ ಪೋಷಣ ಅಭಿಯಾನ ಯೋಜನೆ 2018ರಿಂದ ಆರಂಭವಾಗಿದ್ದು, ಸಮುದಾಯದ ಮಹಿಳೆ ಮತ್ತು ಮಕ್ಕಳಲ್ಲಿನ ಅಪೌಷ್ಟಿಕತೆ, ತಾಯಿ- ಶಿಶು ಮರಣ ತಪ್ಪಿಸಲು ಭಾರತ ಸರ್ಕಾರ ರೂಪಿಸಿರುವ ಮಹತ್ವದ ಯೋಜನೆಯಾಗಿದೆ ಎಂದರು. ಪುರಸಭೆ ಸದಸ್ಯೆ ಮಂಜುಳಾ ಪ್ರಕಾಶ ಪಟ್ಟಣಶೆಟ್ಟಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಗಂಗಮ್ಮ ಮುಳ್ಳೂರ, ಹಫೀಜಾ ತಹಶೀಲ್ದಾರ್, ಜಾಹೀದಾ ನಾಯ್ಕರ, ಫಾತಿಮಾ, ಆಫ್ರಿನಾ, ಅಂಗನವಾಡಿ ಕಾರ್ಯಕರ್ತೆಯರಾದ ಎಸ್.ಎಸ್. ಪಾಟೀಲ, ಡಿ.ಎಂ. ಜಾಮದಾರ, ಯಶೋಧಾ ಪೂಜಾರ, ಸಹಾಯಕಿಯರಾದ ಶಂಕ್ರಮ್ಮ ಅಸುಂಡಿ, ಸರೋಜಾ ಸೂರ್ಯವಂಶಿ, ಹಾಜರಿದ್ದರು. ಕಾರ್ಯಕ್ರಮ ಸಂಯೋಜಕ ಮಂಜು ಗುಗ್ಗರಿ ನಿರೂಪಿಸಿ, ವಂದಿಸಿದರು.