ಅಂಗನವಾಡಿ ಪರಿಶೀಲಿಸಿದ ಜಿಪಂ ಸಿಇಒ

13-kollegal-8
ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮ ಸಮೀಪದ ಆಂಜನೇಯಪುರದ ಅಂಗನವಾಡಿ ಕೇಂದ್ರಕ್ಕೆ ಮಂಗಳವಾರ ಜಿಪಂ ಸಿಇಒ ಮೋನಾ ರೋಹಟ್ ಭೇಟಿ ನೀಡಿ ಪರಿಶೀಲಿಸಿದರು.
Published on

ಕೊಳ್ಳೇಗಾಲ: ತಾಲೂಕಿನ ಮಧುವನಹಳ್ಳಿ ಸಮೀಪದ ಆಂಜನೇಯಪುರದ ಅಂಗನವಾಡಿ ಕೇಂದ್ರಕ್ಕೆ ಮಂಗಳವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋಹಟ್ ಭೇಟಿ ನೀಡಿ ಪರಿಶೀಲಿಸಿದರು.

ಅಂಗನವಾಡಿ ಕೇಂದ್ರದ ನೈರ್ಮಲ್ಯ, ಮಕ್ಕಳ ದಾಖಲಾತಿಯನ್ನು ಪರಿಶೀಲಿಸಿದರು. ಈ ವೇಳೆ ಮಕ್ಕಳಿಗೆ ನೀಡಬೇಕಿದ್ದ ಆಟಿಕೆಗಳನ್ನು ದಾಸ್ತಾನು ಮಾಡಿದ್ದನ್ನು ಕಂಡ ಸಿಇಒ ಅವರು ಸ್ಥಳದಲ್ಲಿದ್ದ ಅಂಗನವಾಡಿ ಸಹಾಯಕಿ ಅವರಿಗೆ ಏಕೆ ಮಕ್ಕಳಿಗೆ ಆಟಿಕೆಗಳನ್ನು ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಾವೇ ಆಟಿಕೆಗಳನ್ನು ಪಡೆದುಕೊಂಡು ಮಕ್ಕಳಿಗೆ ವಿತರಣೆ ಮಾಡಿದರು.

ಗ್ರಾ.ಪಂ ಸದಸ್ಯ ರಾಚಪ್ಪಾಜಿ ಮಾತನಾಡಿ, ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸಮಯಕ್ಕೆ ಸರಿಯಾಗಿ ಕೇಂದ್ರಕ್ಕೆ ಬರುವುದಿಲ್ಲ. ತಡವಾಗಿ ಬಂದು ಬೇಗನೆ ನಿರ್ಗಮಿಸುತ್ತಾರೆ. ಈ ಬಗ್ಗೆ ಹಲವು ಬಾರಿ ದೂರಿದರೂ ಪ್ರಯೋಜನವಾಗಿಲ್ಲ ಎಂದರು.

ಸಿಇಒ ಮೋನಾ ರೋಹಟ್ ಪ್ರತಿಕ್ರಿಯಿಸಿ, ಸ್ಥಳದಲ್ಲಿದ್ದ ಮಧುವನಹಳ್ಳಿ ಪಂಚಾಯಿತಿ ಪಿಡಿಒ ಶೋಭರಾಣಿ ಅವರಿಗೆ ಅಂಗನವಾಡಿ ಶಿಕ್ಷಕಿಯನ್ನು ಕರೆದು ಈ ಬಗ್ಗೆ ವಿಚಾರಿಸಿ ಸರಿಯಾದ ಸಮಯಕ್ಕೆ ಬರುವಂತೆ ತಾಕೀತು ಮಾಡಿ ಎಂದು ಸೂಚನೆ ನೀಡಿದರು. ತಾ.ಪಂ. ಸಹಾಯಕ ನಿರ್ದೇಶಕ ಗೋಪಾಲಕೃಷ್ಣ, ಪಿಡಿಒ ಶೋಭರಾಣಿ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net