ಮಾಡಳ್ಳಿ ಗ್ರಾಮದಲ್ಲಿ ಅಂಗನವಾಡಿ ಹಬ್ಬ ಆಚರಣೆ

Putani 1
Published on

ಲಕ್ಷ್ಮೇಶ್ವರ: ತಾಲೂಕಿನ ಮಾಡಳ್ಳಿ ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ 36ರಲ್ಲಿ ಮಕ್ಕಳಿಂದ ಅಂಗನವಾಡಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.

ಪ್ರಾಥಮಿಕ ಶಾಲಾ ಹಂತದಲ್ಲಿ ಚಿಣ್ಣರ ಮೇಳ, ಕಲಿಕಾ ಹಬ್ಬ, ಕಲೋತ್ಸವ, ಪ್ರತಿಭಾ ಕಾರಂಜಿ, ವಾರ್ಷಿಕೋತ್ಸವದಂತಹ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ, ಅಂಗನವಾಡಿ ಕೇಂದ್ರಗಳಲ್ಲಿ ತಾಲೂಕು ವ್ಯಾಪ್ತಿಯಲ್ಲಿಯೇ ಮೊದಲು ಎನ್ನಬಹುದಾದ ಅಂಗನವಾಡಿ ಹಬ್ಬ ಹೊಸತನ ಸೃಷ್ಟಿಸಿದೆ. ಚಿಣ್ಣರು ವಿವಿಧ ವೇಷಭೂಷಣಗಳಿಂದ ಗಮನ ಸೆಳೆದರು. ಗ್ರಾಮದ ಮಕ್ಕಳ ಜಾಗೃತಿ ಸಂಸ್ಥೆಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳ ಪಾಲಕರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಪಾಲ್ಗೊಂಡಿದ್ದರು.

ನೃತ್ಯ, ಅಭಿನಯದ ಜತೆಗೆ ಸಂತೆ ವ್ಯಾಪಾರ, ಉಳುವುದು, ಬಿತ್ತುವುದು, ಬೀಸುವದು, ಕುಟ್ಟುವುದು ಅಲ್ಲದೆ, ಅಂಗನವಾಡಿ ಶಿಕ್ಷಕಿಯಾಗಿ ವಿದ್ಯಾರ್ಥಿಯೊಬ್ಬ ಪಾಠ ಹೇಳಿದ್ದು ಗಮನ ಸೆಳೆಯಿತು. ಹೊಲದಲ್ಲಿ ಬಿತ್ತನೆ ಮಾಡುವಾಗ ಎತ್ತುಗಳನ್ನು ರೈತ ನಿಭಾಯಿಸುವ ಅಭಿನಯ ಸಹ ಮಕ್ಕಳಿಂದ ಮೂಡಿ ಬಂದಿತು.

‘ಮಕ್ಕಳಿಂದ ಅಂಗನವಾಡಿ ಹಬ್ಬ ಆಚರಿಸಲು ನಿರ್ಧರಿಸಿದಾಗ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು, ಮಕ್ಕಳ ಜಾಗೃತಿ ಸಂಸ್ಥೆಯವರು ಸಹಕಾರ ನೀಡಿದರು. ಮಕ್ಕಳಿಗೆ ನಮ್ಮ ಸಂಪ್ರದಾಯ, ಸಂಸ್ಕೃತಿಗಳನ್ನು ತಿಳಿಸಿಕೊಡುವ ಕಾರ್ಯ ಮಾಡಲಾಗಿದೆ’ ಎಂದು ಅಂಗನವಾಡಿ ಕಾರ್ಯಕರ್ತೆ ಈರಮ್ಮ ಅಂಗಡಿ ಹೇಳಿದರು.

ಯಳವತ್ತಿ ವಲಯದಲ್ಲಿ ಮಕ್ಕಳ ಜಾಗೃತಿ ಸಂಸ್ಥೆಯವರು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ತಾಲೂಕು ವ್ಯಾಪ್ತಿಯ ಮಾಡಳ್ಳಿ ಗ್ರಾಮದ ಕೇಂದ್ರ ಸಂಖ್ಯೆ 36ರಲ್ಲಿ ಅಂಗನಾಡಿ ಹಬ್ಬ ಆಚರಣೆ ವಿನೂತನ ಪ್ರಯೋಗವಾಗಿದ್ದು, ಮಕ್ಕಳ ಪ್ರತಿಭೆಗೆ ಇದೊಂದು ವೇದಿಕೆಯಾಗಲಿದೆ. ಮೃತ್ಯುಂಜಯ ಜಿ., ಸಿಡಿಪಿಒ ಶಿರಹಟ್ಟಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net