ಅಂಗನವಾಡಿ ನೌಕರರ ಪ್ರತಿಭಟನೆ

HN 26-1
Published on

ವಿಜಯಪುರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಅಂಗನವಾಡಿ ನೌಕರರ ಸಂಘ, ಅಖಿಲ ಭಾರತ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಒಕ್ಕೂಟ (ಸಿಐಟಿಯು) ಜಂಟಿಯಾಗಿ ವಿಜಯಪುರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಮೆರವಣಿಗೆ ಮುಖಾಂತರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಭೀಮಶಿ ಕಲಾದಾಗಿ ಮಾತನಾಡಿ, ಅಂಗನವಾಡಿ ನೌಕರರಿಗೆ 21 ಸಾವಿರ ಕನಿಷ್ಟ ವೇತನ ಹೆಚ್ಚಿಸಬೇಕು. ಈಗಿರುವ ಹುದ್ದೆಗಳನ್ನು ಕಾಯಂಗೊಳಿಸಬೇಕು. 10 ಸಾವಿರ ರೂ. ನಿವೃತ್ತಿ ವೇತನ ನೀಡಬೇಕೆಂದು ಒತ್ತಾಯಿಸಿದರು.

ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಸುನಂದಾ ನಾಯಕ ಮಾತನಾಡಿ, ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಆದಾಯ ತೆರಿಗೆ ವ್ಯಾಪ್ತಿ ಹೊರಗಿರುವ ಕುಟುಂಬಗಳಿಗೆ 7500 ರೂ. ನಗದು ನೀಡಬೇಕು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೆಲಸದ ದಿನಗಳನ್ನು ವಾರ್ಷಿಕ 200 ದಿನಗಳಿಗೆ ವಿಸ್ತರಿಸಿ, ಕನಿಷ್ಟ ಕೂಲಿ 600 ರೂ.ಗೆ ಹೆಚ್ಚಿಸಬೇಕು. ಹಣಕಾಸು ವಲಯ ಸೇರಿ ಸಾರ್ವಜನಿಕ ವಲಯದ ಖಾಸಗೀಕರಣ ನಿಲ್ಲಿಸಲು ಒತ್ತಾಯಿಸಿದರು.

ಸಂಘಟಕರಾದ ಸುರೇಖಾ ರಜಪೂತ, ಲಕ್ಷ್ಮಣ ಹಂದ್ರಾಳ, ಜಯಶ್ರೀಪೂಜಾರಿ, ಗೀತಾ ನಾಯಕ, ಸುವರ್ಣಾ ಹಲಗಣಿ, ಎಸ್.ಎಂ. ಜಮಾದಾರ, ಶಶಿಕಲಾ ಬಿರಾದಾರ, ಸಿದ್ದಮ್ಮ ಶಿರೋಳ, ರಾಜೇಶ್ವರಿ ಸಂಕದ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net