

ಮಂಡ್ಯ: ಆಹಾರ, ಆರೋಗ್ಯ ಮತ್ತು ಶಿಕ್ಷಣದ ಹಕ್ಕು ಉಳಿಸೋಣ-ಬೆಳೆಸೋಣ-ಬದುಕೋಣ ಘೋಷಣೆಯೊಂದಿಗೆ ಜ.23ರಿಂದ ಮೂರು ದಿನ ಸಂಸದರ ಕಚೇರಿ ಚಲೋ ನಡೆಸಲಾಗುವುದು ಎಂದು ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮೀ ತಿಳಿಸಿದರು.
ರಾಜ್ಯದ 28 ಸಂಸದರ ಕಚೇರಿ ಎದುರು 23ರಂದು ಅಂಗನವಾಡಿ ನೌಕರರು, 24ರಂದು ಕಾರ್ಖಾನೆ ಕಾರ್ಮಿಕರು ಹಾಗೂ 25 ರಂದು ಅಸಂಘಟಿತ ಕ್ಷೇತ್ರದ ಕಾರ್ಮಿಕರು ಚಳವಳಿಯಲ್ಲಿ ಭಾಗವಹಿಸಲಿದ್ದಾರೆ. ಆಹಾರ, ಆರೋಗ್ಯ ಮತ್ತು ಶಿಕ್ಷಣದ ಹಲವು ಯೋಜನೆಗಳನ್ನು ಖಾಯಂ ಮಾಡುವ ಮುಖಾಂತರ ಹಕ್ಕುಗಳನ್ನು ಸಾರ್ವತ್ರಿಕಗೊಳಿಸಬೇಕು. ಭಾರತೀಯ ಕಾರ್ಮಿಕ ಸಮ್ಮೇಳನದ ಶಿಾರಸಿನಂತೆ ಈ ಯೋಜನೆಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿಗೆ ಸೌಲಭ್ಯ ಸಿಗಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಅಂಗನವಾಡಿ ಮತ್ತು ಬಿಸಿಯೂಟ ನೌಕರರು, ಆಶಾ ಮತ್ತು ಇತರೆ ಸಿಬ್ಬಂದಿಗೆ ಮಾಸಿಕ 31 ಸಾವಿರ ರೂ ಕನಿಷ್ಟ ವೇತನ, ನಿವೃತ್ತಿ ಸೌಲಭ್ಯಗಳದ ಜತೆಗೆ ಕನಿಷ್ಟ 10 ಸಾವಿರ ರೂ ಪಿಂಚಣಿ ಕೊಡಬೇಕು. ಈವರೆಗೂ ನಿವೃತ್ತಿ ಹೊಂದಿದ್ದ ಎಲ್ಲ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಗೆ ಗ್ರಾಚ್ಯುಯಿಟಿ ಹಣ ಬಿಡುಗಡೆ ಮಾಡಬೇಕು. ರಾಜ್ಯದಲ್ಲಿ ಇಲಾಖೇತರ ಕೆಲಸಗಳಾದ ಬಿಎಲ್‌ಒ ಸರ್ವೆ, ಯೋಜನೇತರ ಕೆಲಸಗಳಾದ ಭಾಗ್ಯಲಕ್ಷ್ಮೀ, ಮಾತೃವಂದನಾ, ಗೃಹಲಕ್ಷ್ಮೀ ಮುಂತಾದ ಕೆಲಸಗಳಲ್ಲಿ ಅಂಗನವಾಡಿ ನೌಕರರ ಬಳಕೆ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಸಂಘದ ಜಿಲ್ಲಾಧ್ಯಕ್ಷೆ ಪ್ರಮೀಳಕುಮಾರಿ, ಕಾರ್ಯದರ್ಶಿ ಜಯಲಕ್ಷ್ಮೀ, ಖಜಾಂಚಿ ಮಂಜುಳಾರಾಜ್, ಬಿಸಿಯೂಟ ನೌಕರರ ಸಂಘದ ಕಾರ್ಯದರ್ಶಿ ಶಶಿಕಲಾ, ಉಪಾಧ್ಯಕ್ಷೆ ಪುಟ್ಟಮ್ಮ ಇದ್ದರು.