ಎಲ್ಲರ ಶ್ರಮದಿಂದ ಮಾದರಿ ಅಂಗನವಾಡಿ ಕೇಂದ್ರ ನಿರ್ಮಾಣ: ಸಿಡಿಪಿಒ ಸಿಂಧೂ ಹೇಳಿಕೆ

ANGANAWADI KENDRA
ಕುಕನೂರು ತಾಲೂಕಿನ ತಳಕಲ್ ಗ್ರಾಮದ 6ನೇ ಅಂಗನವಾಡಿ ಕೇಂದ್ರದಲ್ಲಿ ಪೋಷಕರ ನಡೆ ಅಂಗನವಾಡಿ ಕಡೆ ಕಾರ್ಯಕ್ರಮವನ್ನು ಸಿಡಿಪಿಒ ಸಿಂಧೂ ಯಲಿಗಾರ ಉದ್ಘಾಟಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಗಂಗಪ್ಪ, ಜಿಲ್ಲಾ ಕಲಿಕಾ ಟಾಟಾ ಟ್ರಸ್ಟ್ ಸಂಯೋಜಕ ಅಶೋಕ, ಗ್ರಾಪಂ ಅಧ್ಯಕ್ಷೆ ಜಾಹೇದಾ ಬೇಗಂ, ಉಪಾಧ್ಯಕ್ಷೆ ಜಿಂದಾಬಿ ಇದ್ದರು.
Published on

ಕುಕನೂರು: ಮಕ್ಕಳ ಸಮಗ್ರ ಬೆಳವಣಿಗೆಗೆ ಪೋಷಕರ ಪಾತ್ರ ಮುಖ್ಯವಾಗಿದ್ದು, ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಒತ್ತು ನೀಡಬೇಕು ಎಂದು ಸಿಡಿಪಿಒ ಸಿಂಧೂ ಯಲಿಗಾರ ಹೇಳಿದರು.

ತಾಲೂಕಿನ ತಳಕಲ್ ಗ್ರಾಮದ 6ನೇ ಅಂಗನವಾಡಿ ಕೇಂದ್ರದಲ್ಲಿ ಪೋಷಕರ ನಡೆ ಅಂಗನವಾಡಿ ಕಡೆ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, ಇಲಾಖೆಯಲ್ಲಿ ಸಾಕಷ್ಟು ಸೌಲಭ್ಯಗಳಿವೆ. ಅಂಗನವಾಡಿಗಳು ಕಲಿಕಾ ಕೇಂದ್ರಗಳಾಗಿ ಪರಿವರ್ತನೆಗಳಾಗಿದ್ದು, ರಾಜ್ಯದಲ್ಲಿಯೇ ಮಾದರಿಯಾಗಿವೆ. ಇದಕ್ಕೆ ಎಲ್ಲರ ಪರಿಶ್ರಮ ಕಾರಣ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಗಂಗಪ್ಪ ಮಾತನಾಡಿ, ಇದು ತುಂಬಾ ಉಪಯುಕ್ತ ಕಾರ್ಯಕ್ರಮವಾಗಿದ್ದು, ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ. ನಮ್ಮ ಕೇಂದ್ರಗಳನ್ನು ಮಾದರಿ ಕೇಂದ್ರ ಮಾಡಲು ತಮ್ಮೆಲ್ಲರ ಸಹಕಾರ ಅತಿ ಅವಶ್ಯ ಎಂದು ಹೇಳಿದರು.

ಇಂತಹ ಕಾರ್ಯಕ್ರಮಗಳಿಗೆ ತಾವೆಲ್ಲರೂ ಸಮಯ ನೀಡಿ ನಿಮ್ಮ ನಿಮ್ಮ ಮಕ್ಕಳ ಸಮಗ್ರ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳಬೇಕು. ಮಗುವಿನ ಸಾಮಾಜಿಕ, ಶೈಕ್ಷಣಿಕ, ಭಾವನಾತ್ಮಕ, ದೈಹಿಕ, ಗ್ರಹಣಶಕ್ತಿ ಬೆಳವಣಿಗೆ, ಆರೋಗ್ಯ, ಪೌಷ್ಟಿಕ ಮಟ್ಟ ಎಲ್ಲದರ ಕುರಿತು ಇಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ ಎಂದು ತಿಳಿಸಿದರು.

ಜಿಲ್ಲಾ ಕಲಿಕಾ ಟಾಟಾ ಟ್ರಸ್ಟ್ ಸಂಯೋಜಕ ಅಶೋಕ, ಗ್ರಾಪಂ ಅಧ್ಯಕ್ಷೆ ಜಾಹೇದಾ ಬೇಗಂ, ಉಪಾಧ್ಯಕ್ಷೆ ಜಿಂದಾಬಿ, ಸದಸ್ಯರಾದ ಚೈತ್ರಾ, ಕವಿತಾ, ಹಿರಿಯ ಮೇಲ್ವಿಚಾರಕಿ ಜಯಲಕ್ಷ್ಮೀ ಮೆಣಸಿನಕಾಯಿ, ಪ್ರಮುಖರಾದ ನೇತ್ರಾವತಿ, ಸುಪ್ರೀತಾ ಬಡಿಗೇರ, ಸರ್ವಮಂಗಳಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net